ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕಲು ರಾಜ್ಯ ಸರ್ಕಾರ ಖಾಸಗಿ ಬಸ್ ಚಾಲಕರು-ನಿರ್ವಾಹಕರಿಂದ ಬಸ್ ಓಡಿಸಲು ಹಾಗೂ ಎಸ್ಮಾ ಜಾರಿಗೊಳಿಸಲು ಮುಂದಾಗಿದ್ದರೆ, ಇನ್ನೊಂದೆಡೆ ಮುಷ್ಕರ ನಿರತ ಚಾಲಕರು ಬಸ್ ಓಡಿಸದಿದ್ದರೆ ಅರೆಸ್ಟ್ ಮಾಡಿಸುವ ಬೆದರಿಕೆಯೊಡ್ಡಿದೆ.
ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಬಸ್ ಸಂಚಾರ ರದ್ದುಗೊಳಿಸಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ, ಎರಡು ದಿನಗಳಿಂದ ಮುಷ್ಕರ ನಡೆಯುತ್ತಿರುವುದರಿಂದ ಸಾರಿಗೆ ಇಲಾಖೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಮುಷ್ಕರ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಮಾಡಿದ ಮನವಿಗೂ ಪ್ರತಿಭಟನಾಕಾರರು ಬಗ್ಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕಲು ಮುಂದಾಗಿದ್ದು, ಬಸ್ ಓಡಿಸದಿದ್ದರೆ ಬಂಧಿಸುವುದಾಗಿ ಚಾಲಕರಿಗೆ-ನಿರ್ವಾಹಕರಿಗೆ ಎಚ್ಚರಿಕೆ ನೀಡಿದೆ.
ಆರ್.ಆರ್ ನಗರ ಡಿಪೋ ನಂಬರ್ 21ರಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಬೆದರಿಕೆ ಹಾಕಿರುವ ಪೊಲೀಸರು ಬಸ್ ಓಡಿಸದಿದ್ದರೆ ಅರೆಸ್ಟ್ ಮಾಡುವುದಾಗಿ ಎಚ್ಚರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನೊಂದೆಡೆ 2000 ಟ್ರೇನಿ ಚಾಲಕರಿಗೆ ಬಸ್ ಓಡಿಸಲು ಸಾರಿಗೆ ಇಲಾಖೆ ಸೂಚನೆ ನೀಡಿದೆ ಎನ್ನಲಾಗಿದೆ.