ಬೆಂಗಳೂರು: ಕನ್ನಡ ಸಂಘಟನೆಗಳು, ರೈತರು, ಸಾರಿಗೆ ನೌಕರರ ಹೋರಾಟದ ನಂತರ ಖಾಸಗಿ ಆಸ್ಪತ್ರೆ ವೈದ್ಯರು ನಾಳೆ ಮುಷ್ಕರ ಕೈಗೊಂಡಿದ್ದಾರೆ.
ನಾಳೆ ಖಾಸಗಿ ಆಸ್ಪತ್ರೆ ಒಪಿಡಿ ಬಂದ್ ಆಗಲಿದ್ದು, ಒಂದು ದಿನದ ಮುಷ್ಕರಕ್ಕೆ ವೈದ್ಯರು ಸಿದ್ಧತೆ ಕೈಗೊಂಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಖಾಸಗಿ ಆಸ್ಪತ್ರೆ ಒಪಿಡಿ ಸೇವೆ ಸ್ಥಗಿತಗೊಳಿಸಲಾಗಿರುತ್ತದೆ. ತುರ್ತು ಸೇವೆ ಮಾತ್ರ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಆಯುರ್ವೇದ ಶಿಕ್ಷಣ ತಿದ್ದುಪಡಿ ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯಾದ್ಯಂತ ನಾಳೆ ಖಾಸಗಿ ಆಸ್ಪತ್ರೆ ವೈದ್ಯರು ಮುಷ್ಕರ ಕೈಗೊಂಡಿದ್ದಾರೆ.
ಆಯುರ್ವೇದ ಶಿಕ್ಷಣ ತಿದ್ದುಪಡಿ ಅಧಿಸೂಚನೆ ಹಿಂಪಡೆಯುವಂತೆ ಆಗ್ರಹಿಸಿ ನಾಳೆ ಖಾಸಗಿ ಆಸ್ಪತ್ರೆಗಳ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ರಜೆಯನ್ನು ಕಡಿತ ಮಾಡಲಾಗಿದೆ. ನಾಳೆ ಆಸ್ಪತ್ರೆಗಳಲ್ಲಿ ಸೇವೆ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕಿದೆ. ಹೊರ ರೋಗಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಆದೇಶ ಹೊರಡಿಸಿದ್ದಾರೆ ಎಂದು ಹೇಳಲಾಗಿದೆ.