ಬೆಂಗಳೂರು: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ಸಿಡಿದೆದ್ದಿರುವ ರೈತರು ಕಾರ್ಪೊರೇಟ್ ಸೆಕ್ಟರ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಂಬಾನಿ, ಅದಾನಿಗಳಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ರೈತರಿಗೆ ಮರಣ ಶಾಸನವಾಗಿರುವ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಂಬಾನಿ, ಅದಾನಿ ಬಾಯ್ಕಟ್ ಘೋಷಣೆ ಆರಂಭಿಸಿರುವ ಪ್ರತಿಭಟನಾನಿರತ ರೈತರು, ಜಿಯೋ ನೆಟ್ ವರ್ಕ್ ಅನ್ ಸಬ್ಸ್ ಕ್ರೈಬ್ ಹೋರಾಟ ಆರಂಭಿಸಿದ್ದಾರೆ. ಈ ಮೂಲಕ ಬೇರೆ ನೆಟ್ ವರ್ಕ್ ಗೆ ಪೋರ್ಟ್ ಆಗುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿಯೂ ಅಂಬಾನಿ, ಅದಾನಿ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ವಿನೂತನ ಪ್ರತಿಭಟನೆ ಮೂಲಕ ರೈತರು ರಿಲೈನ್ಸ್ ಮಾಲ್, ಪೆಟ್ರೋಲ್ ಬಂಕ್ ಗಳಲ್ಲಿ ಖರೀದಿ ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಪ್ರತಿಭಟನೆ ಆರಂಭಿಸಿರುವ ರೈತರು ಅಂಬಾನಿ, ಅದಾನಿ ಬಾಯ್ಕಟ್ ಚಳುವಳಿ ಆರಂಭಸಿದ್ದು, ಜಿಯೋ ಅನ್ಸ್ ಸಬ್ಸ್ ಕ್ರೈಬ್ ಮಾಡುವಂತೆ ಘೋಷಣೆ ಕೂಗಿದ್ದಾರೆ.