ಮೆಕ್ಕೆಜೋಳದ ದರ ಈ ಬಾರಿ ಕಡಿಮೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಸಂಕಷ್ಟದ ಹೊತ್ತಲ್ಲಿ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸುವುದಿಲ್ಲ ಎಂದು ಸರ್ಕಾರ ಹೇಳಿದೆ.
ಸರ್ಕಾರದ ಉತ್ತರಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದ್ದಾರೆ. ವಿಧಾನಸಭೆಯಲ್ಲಿ ಈ ಕುರಿತ ಚರ್ಚೆಯ ವೇಳೆ ಸಿಎಂ ಯಡಿಯೂರಪ್ಪ ಮೆಕ್ಕೆಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಮೆಕ್ಕೆಜೋಳವನ್ನು ಜನ ಆಹಾರವಾಗಿ ಬಳಸುವುದು ಕಡಿಮೆ. ಪಶು ಆಹಾರ, ಕೋಳಿ ಸಾಕಾಣಿಕೆಗೆ ಇದನ್ನು ಬಳಸಲಾಗುತ್ತದೆ. ಹಾಗಾಗಿ ಬೆಳೆ ಖರೀದಿಸಿದರೆ ವಿತರಿಸಲು ಸಾಧ್ಯವಾಗುವುದಿಲ್ಲ. ವಿತರಣೆ ಸಾಧ್ಯವಿದ್ದರೆ ಮಾತ್ರ ಬೆಂಬಲ ಬೆಲೆ ನೀಡಿ ಖರೀದಿಸಲು ಕೇಂದ್ರ ಸರ್ಕಾರ ತಿಳಿಸಿದೆ. ಹೀಗಾಗಿ ಮೆಕ್ಕೆಜೋಳವನ್ನು ಬೆಂಬಲ ಬೆಲೆ ನೀಡಿ ಖರೀದಿಸಲು ಸಾಧ್ಯವಿಲ್ಲ ಎಂದು ಸಚಿವ ಜೆ.ಸಿ. ಮಧುಸ್ವಾಮಿ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಈ ವರ್ಷ ಯಾವುದೇ ಕೃಷಿ ಉತ್ಪನ್ನಗಳ ಬೆಲೆಗಳನ್ನು ನಿಗದಿತ ಬೆಂಬಲ ಬೆಲೆಗಿಂತ ಹೆಚ್ಚು ಪ್ರೋತ್ಸಾಹ ಧನ ನೀಡಿ ಖರೀದಿಸಲು ಸಾಧ್ಯವಿಲ್ಲ ಎಂದು ಉತ್ತರ ನೀಡಿದ್ದಾರೆ.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸರ್ಕಾರ ರೈತರ ಪರವಾಗಿಲ್ಲವೆಂದು ಸಭಾತ್ಯಾಗ ಮಾಡಿದ್ದಾರೆ.