ಬೆಂಬಲ ಬೆಲೆ ಯೋಜನೆಯಡಿ ಬೆಳೆಗಳ ಖರೀದಿ ಶೀಘ್ರ ಆರಂಭಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಕುರಿತ ಚರ್ಚೆಯ ವೇಳೆ ಉತ್ತರ ನೀಡಿದ ಸಚಿವರು, ಈ ಬಾರಿ ರೈತರಿಂದ 2.10 ಲಕ್ಷ ಟನ್ ಭತ್ತ ಮತ್ತು 3 ಲಕ್ಷ ಟನ್ ರಾಗಿ ಬೆಂಬಲ ಬೆಲೆ ನೀಡಿ ಖರೀದಿಸಲು ಅನುಮತಿ ನೀಡಲಾಗಿದ್ದು, ಶೀಘ್ರವೇ ಖರೀದಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಡಿಸೆಂಬರ್ 1 ರಿಂದ ನೋಂದಣಿ ಆರಂಭವಾಗಿದೆ. ಸಾಮಾನ್ಯ ಭತ್ತಕ್ಕೆ ಕೇಂದ್ರ ಸರ್ಕಾರ 1868 ರೂಪಾಯಿ, ಗ್ರೇಡ್ 1 ಭತ್ತಕ್ಕೆ 1888 ರೂಪಾಯಿ ನಿಗದಿ ಮಾಡಿದೆ. ಪ್ರತಿ ರೈತರಿಂದ ಎಕರೆಗೆ 16 ಕ್ವಿಂಟಲ್ ನಂತೆ ಗರಿಷ್ಠ 70 ಕ್ವಿಂಟಾಲ್ ಭತ್ತ ಖರೀದಿ ಮಾಡಲಾಗುವುದು. ಹೆಚ್ಚಿನ ಜಮೀನು ಹೊಂದಿರುವ ರೈತರು ತರುವ ಭತ್ತವನ್ನು ಕೂಡ ಖರೀದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.