ನವದೆಹಲಿ: ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ರೈತ ಸಂಘಟನೆಗಳು ಪಟ್ಟು ಹಿಡಿದಿದ್ದು, ಕೇಂದ್ರ ಗೃಹಸಚಿವ ಅಮಿತ್ ಶಾ ರೈತ ಮುಖಂಡರೊಂದಿಗೆ ಮಂಗಳವಾರ ರಾತ್ರಿ ಮಹತ್ವದ ಸಭೆ ನಡೆಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ಮತ್ತು ಭಾರತೀಯ ಕಿಸಾನ್ ಸಭಾದ ನಾಯಕರು ಸೇರಿದಂತೆ 13 ರೈತ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮೊದಲಾದವರು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಅತಿಥಿಗೃಹದಲ್ಲಿ ಸಭೆ ನಡೆಸಿದ್ದಾರೆ.
ನೂತನ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ರೈತರು ಪಟ್ಟುಹಿಡಿದಿದ್ದಾರೆ. ಆದರೆ, ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು, ಕಾಯ್ದೆಯಲ್ಲಿನ ಕೆಲವು ನಿಯಮಗಳನ್ನು ಕೈಬಿಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಕಳೆದ 13 ದಿನಗಳಿಂದ ಹೋರಾಟ ಕೈಗೊಂಡಿರುವ ರೈತರು ಕಾಯ್ದೆ ರದ್ದು ಮಾಡುವವರೆಗೆ ಹೋರಾಟ ಮುಂದುವರೆಸಲು ತೀರ್ಮಾನಿಸಿದ್ದು, ರಾಮಲೀಲಾ ಮೈದಾನಕ್ಕೆ ಪ್ರತಿಭಟನೆ ಸ್ಥಳಾಂತರಿಸಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.