ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ತಾನು ತಯಾರಿಸಿದ ಕೊರೊನಾ ವಿರುದ್ಧದ ಲಸಿಕೆ ಕೋವಾಕ್ಸಿನ್ಗೆ ತುರ್ತು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದೆ.
ಫೈಜರ್, ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬಳಿಕ ಇದೀಗ ಭಾರತ್ ಬಯೋಟೆಕ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿದ ಮೂರನೇ ಸಂಸ್ಥೆಯಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ಭಾರತ್ ಬಯೋಟೆಕ್ಗಳೆರಡೂ ಜಂಟಿಯಾಗಿ ಈ ಲಸಿಕೆಯನ್ನ ಕಂಡುಹಿಡಿದಿತ್ತು.
ಸೆರಮ್ ಹಾಗೂ ಭಾರತ್ ಬಯೋಟೆಕ್ಗಳೆರಡೂ ಪ್ರಸ್ತುತ ದೇಶದಲ್ಲಿ ತಮ್ಮ ಲಸಿಕೆಗಳ ಮೂರನೇ ಹಂತದ ಪ್ರಯೋಗವನ್ನ ನಡೆಸುತ್ತಿವೆ. ಕೊರೊನಾ ಲಸಿಕೆಗೆ ಅನುಮತಿ ಸಿಗಬೇಕು ಅಂದರೆ ಅದು ಶೇಕಡಾ
60ರಷ್ಟು ಪರಿಣಾಮಕಾರಿಯಾಗಿರೋದು ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಆದರೆ ಕೋವ್ಯಾಕ್ಸಿನ್ 60 ಪ್ರತಿಶತಕ್ಕಿಂತಲೂ ಜಾಸ್ತಿ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿದೆ ಅಂತಾ ಭಾರತ್ ಬಯೋಟೆಕ್ ಹೇಳಿದೆ. ಆದರೆ ಕೋವ್ಯಾಕ್ಸಿನ್ ಪ್ರಯೋಗದ ವೇಳೆ ಸ್ವಯಂ ಸೇವಕರಾಗಿ ಭಾಗಿಯಾಗಿ ಲಸಿಕೆ ಸೇವಿಸಿದ್ದ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಲಸಿಕೆ ಸೇವಿಸಿದ ಬಳಿಕ ಸೋಂಕಿಗೆ ಒಳಪಟ್ಟಿದ್ದರಿಂದ ಬಯೋಟೆಕ್ ಲಸಿಕೆ ವಿವಾದಕ್ಕೆ ಸಿಲುಕಿತ್ತು.