ಕೊಲ್ಕೊತ್ತಾ: ಕೇಂದ್ರ ಸರ್ಕಾರದ ನೂತನ ಕೃಷಿ ನೀತಿ ವಿರೋಧಿಸಿ ರೈತ ಸಂಘಟನೆಗಳು ಡಿಸೆಂಬರ್ 8 ರಂದು ಭಾರತ ಬಂದ್ ಗೆ ಕರೆ ನೀಡಿವೆ. ಬಂದ್ ಗೆ ಕಾಂಗ್ರೆಸ್, ಡಿಎಂಕೆ, ಜೆಡಿಎಸ್, ತೃಣಮೂಲ ಕಾಂಗ್ರೆಸ್ ಸೇರಿ ಅನೇಕ ಪಕ್ಷಗಳು, ಸಂಘಟನೆಗಳು ಸಾಥ್ ನೀಡಿದ್ದು, ಭಾರೀ ಬೆಂಬಲ ವ್ಯಕ್ತವಾಗಿದೆ.
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ಘಟನೆ ವಿರೋಧಿಸಿ ನಾಳೆಯೇ ಬಿಜೆಪಿ ಬಂದ್ ಗೆ ಕರೆ ನೀಡಿದೆ. ಡಿಸೆಂಬರ್ 8 ರಂದು ಮಂಗಳವಾರ 12 ಗಂಟೆ ಕಾಲ ಉತ್ತರ ಬಂಗಾಳದಲ್ಲಿ ಬಂದ್ ಗೆ ಕರೆ ನೀಡಲಾಗಿದೆ.
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಸಿಲಿಗುರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಕಂಟ್ರಿ ಬಾಂಬ್ ನಿಂದ ನಮ್ಮ ಪಕ್ಷದ ಕಾರ್ಯಕರ್ತರೊಬ್ಬರು ಗಾಯಗೊಂಡಿದ್ದಾರೆ. ಪೊಲೀಸರ ಏಟಿನಿಂದ ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಇದು ಕೊಲೆಗಿಂತಲೂ ಕಡಿಮೆ ಏನಲ್ಲ ಎಂದು ಹೇಳಿದ್ದಾರೆ.
ಪೊಲೀಸರ ಲಾಠಿಚಾರ್ಜ್ ಸಂದರ್ಭದಲ್ಲಿ ಉಲೆನ್ ರಾಯ್(50) ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ. ಜಲ್ ಪೈಗುರಿ ಗಜೋಲ್ಡಾಬಾ ಪ್ರದೇಶದ ನಿವಾಸಿಯಾಗಿರುವ ಉಲೆನ್ ರಾಯ್ ಪೊಲೀಸರ ಏಟಿನಿಂದ ಮೃತಪಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಇದನ್ನು ವಿರೋಧಿಸಿ ಬಿಜೆಪಿ ಯುವಮೋರ್ಚಾ ವತಿಯಿಂದ ‘ಉತ್ತರ ಕಾನ್ಯ ಅಭಿಜಾನ್’ ಪ್ರತಿಭಟನಾ ಮೆರವಣಿಗೆ ಕೈಗೊಳ್ಳಲಾಗಿತ್ತು. ಇದಕ್ಕೆ ಅವಕಾಶ ನೀಡದೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯಲ್ಲಿ ಪಕ್ಷದ ಕಾರ್ಯಕರ್ತ ಮೃತಪಟ್ಟು, ಹಲವರು ಗಾಯಗೊಂಡ ಹಿನ್ನೆಲೆಯಲ್ಲಿ ಡಿಸೆಂಬರ್ 8 ರಂದು 12 ಗಂಟೆಗಳ ಕಾಲ ಉತ್ತರ ಬಂಗಾಳದಲ್ಲಿ ಬಂದ್ ಗೆ ಕರೆ ನೀಡಲಾಗಿದೆ.