ನವದೆಹಲಿ: ಹೊಸ ಕೃಷಿ ಮಾರುಕಟ್ಟೆ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 8 ರ ಭಾರತ್ ಬಂದ್ ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ದೇಶಾದ್ಯಂತ ಡಿಸೆಂಬರ್ 8 ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ, ನಡೆಸಿ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಕಾಂಗ್ರೆಸ್ ಮುಂದಾಗಿದೆ.
ನವೆಂಬರ್ 26 ರಿಂದ ದೇಶದ ರಾಜಧಾನಿ ದೆಹಲಿಯ ವಿವಿದ ಗಡಿಭಾಗಗಳಲ್ಲಿ ಕುಳಿತಿರುವ ಸಾವಿರಾರು ರೈತರು ಹೋರಾಟ ನಡೆಸುತ್ತಿದ್ದಾರೆ. ಡಿಸೆಂಬರ್ 8 ರಂದು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಭಾರತ್ ಬಂದ್ ಗೆ ಕರೆ ನೀಡಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ಸೂಚಿಸಿದೆ.
ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು, ಡಿಸೆಂಬರ್ 8 ರಂದು ಭಾರತ ಬಂದ್ ಗೆ ಸಂಪೂರ್ಣ ಬೆಂಬಲ ನೀಡಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ. ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಟ್ರ್ಯಾಕ್ಟರ್ ರ್ಯಾಲಿ, ಸಹಿಸಂಗ್ರಹ, ಕಿಸಾನ್ ರ್ಯಾಲಿಗಳ ಮೂಲಕ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಡಿಸೆಂಬರ್ 8 ರಂದು ಬಂದ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಚಳಿಗಾಲದಲ್ಲಿ ರಾಜಧಾನಿಯ ಹೊರಗೆ ರೈತರು ಹೋರಾಟ ನಡೆಸುತ್ತಿದ್ದಾರೆ. ಇಡೀ ಜಗತ್ತಿಗೆ ರೈತರ ದುಸ್ಥಿತಿ ಗೊತ್ತಾಗಿದೆ. ಆದರೆ, ಆಳುವ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೋನಾ ಕಾಲದಲ್ಲಿ ಸರ್ಕಾರ ರಹಸ್ಯವಾಗಿ ಸುಗ್ರೀವಾಜ್ಞೆ ಜಾರಿಗೆ ತಂದಿದೆ. ಇಡೀ ದೇಶ ಆರ್ಥಿಕ, ಸಾಮಾಜಿಕ, ಆರೋಗ್ಯ ಕುಸಿತದಿಂದ ಕಂಗಾಲಾಗಿರುವ ಹೊತ್ತಲ್ಲಿ ಕೈಗಾರಿಕೋದ್ಯಮಿ, ಕಾರ್ಪೊರೇಟ್ ಸ್ನೇಹಿತರಿಗೆ ಸಹಾಯ ಮಾಡಲು ರಹಸ್ಯವಾಗಿ ಸುಗ್ರಿವಾಜ್ಞೆ ಜಾರಿಗೆ ತರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇದನ್ನು ವಿರೋಧಿಸಿ ಕರೆ ನೀಡಿರುವ ಬಂದ್ ಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಕರ್ನಾಟಕದಲ್ಲಿ ಭಾರತ್ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರೈತಸಂಘಟನೆಗಳು, ಕಬ್ಬು ಬೆಳೆಗಾರರು, ಕನ್ನಡಪರ ಸಂಘಟನೆಗಳು, ಆಟೋ, ಓಲಾ, ಉಬರ್ ಚಾಲಕರ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘ ಬೆಂಬಲ ನೀಡಿದೆ. ರಾಜ್ಯ ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಸೇರಿದಂತೆ ಅನೇಕ ನಾಯಕರು ಬೆಂಬಲ ಸೂಚಿಸಿದ್ದಾರೆ.