ಬುರೇವಿ ಸೈಕ್ಲೋನ್ ತಮಿಳುನಾಡು ಹಾಗೂ ಕೇರಳದಲ್ಲಿ ಶುಕ್ರವಾರ ಅಪ್ಪಳಿಸುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಶುಕ್ರವಾರ ಈ ಎರಡೂ ರಾಜ್ಯಗಳಲ್ಲೂ ಭೂ ಕುಸಿತ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ.
ಹೀಗಾಗಿ ಈಗಾಗಲೇ ದಕ್ಷಿಣ ತಮಿಳುನಾಡು ಹಾಗೂ ದಕ್ಷಿಣ ಕೇರಳದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಅಲಪ್ಪುಝಾ, ಇಡುಕ್ಕಿ ಹಾಗೂ ಎರ್ನಕುಲಂ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯೋ ಸಾಧ್ಯತೆ ಇದೆ.
ಬುರೇವಿ ಚಂಡಮಾರುತದಿಂದ ಜನರನ್ನ ರಕ್ಷಣೆ ಮಾಡಲು ಈಗಾಗಲೇ ತಮಿಳುನಾಡು ಹಾಗೂ ಕೇರಳ ಸರ್ಕಾರಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.
ಕೊರೊನಾ ಮಾರ್ಗಸೂಚಿಗಳನ್ನ ಗಮನದಲ್ಲಿಟ್ಟುಕೊಂಡೇ ಕೇರಳದಲ್ಲಿ 2 ಸಾವಿರಕ್ಕೂ ಹೆಚ್ಚು ನಿರಾಶ್ರಿತರ ಕೇಂದ್ರಗಳನ್ನ ತೆರೆಯಲಾಗಿದೆ. ಚಂಡಮಾರುತದ ದಾಳಿಗೆ ತುತ್ತಾದ ಎಲ್ಲಾ ಪ್ರದೇಶಗಳಲ್ಲಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಬುರೆವಿ ಸೈಕ್ಲಾನ್ ಬಿರುಗಾಳಿ ಸಹಿತ ಭಾರೀ ಮಳೆಯನ್ನ ತಂದೊಡ್ಡಲಿದೆ. 7ನೇ ತಾರೀಖಿನವರೆಗೂ ಇದರ ಎಫೆಕ್ಟ್ ಇರಲಿದೆ ಎಂದು ಅಂದಾಜಿಸಲಾಗಿದೆ, ಪುದುಚೆರಿಯಲ್ಲಿ ಬುರೆವಿ ಚಂಡಮಾರುತ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಬುರೆವಿ ಚಂಡಮಾರುತ ಶ್ರೀಲಂಕಾದ ಉತ್ತರ ಪ್ರಾಂತ್ಯದಲ್ಲಿ ಬುಧವಾರ ರಾತ್ರಿ ಭೂಕುಸಿತವುಂಟುಮಾಡಿದೆ , ತಿರುವಯ ಹಾಗೂ ಕುಚ್ವೇಲಿ ಗ್ರಾಮಗಳ ನಡುವಿನ ತ್ರಿಕೋನಮಾಲಿ ಎಂಬಲ್ಲಿ ಭೂಕುಸಿತಕ್ಕೆ ಕಾರಣವಾಗಿದೆ. ಈಗಾಗಲೇ ಅನೇಕ ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.