ನವದೆಹಲಿ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಒಂದಕ್ಕೆ ಟ್ವಿಟ್ಟರ್ ಕಂಪನಿ ಇದು “ಮ್ಯಾನಿಪುಲೆಟೆಡ್ ಮೀಡಿಯಾ” ಎಂದು ಕೆಂಪು ಅಕ್ಷರದಲ್ಲಿ ಫ್ಲ್ಯಾಗ್ ಅಳವಡಿಸಿದೆ.
ರೈತ ವಿರೋಧಿ ಕಾನೂನು ಜಾರಿ ವಿರೋಧಿಸಿ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸಿರುವ ವಯಸ್ಸಾದ ರೈತರೊಬ್ಬರಿಗೆ ಪೊಲೀಸರು ಲಾಠಿ ಬೀಸುತ್ತಿರುವ ಫೋಟೋವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನ.28 ರಂದು ಟ್ವೀಟ್ ಮಾಡಿದ್ದರು.
“ಇದು ತುಂಬಾ ಬೇಸರ ತರಿಸುವ ಫೋಟೋ- ಜೈ ಜವಾನ್ ಜೈ ಕಿಸಾನ್ ಎಂಬ ಘೋಷ ವಾಕ್ಯ ನಮ್ಮಲ್ಲಿದೆ. ಆದರೆ, ಮೋದಿ ಅವರ ಸೊಕ್ಕಿನಿಂದ ಜವಾನರು ಕಿಸಾನರ ವಿರುದ್ಧ ನಿಂತಿದ್ದಾರೆ” ಎಂದು ಕ್ಯಾಪ್ಶನ್ ನೀಡಿದ್ದರು.
ಆ ಫೋಟೋವನ್ನು ಕೋಟ್ ಮಾಡಿ ಅದರ ಜತೆ ಅದೇ ಸಂದರ್ಭದ ವಿಡಿಯೋವನ್ನು ಜೋಡಿಸಿ ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದರು.
“ಪ್ರೊಪಗಂಡಾ ವರ್ಸಸ್ ರಿಯಾಲಿಟಿ (ಮೂಲ ಉದ್ದೇಶ ಹಾಗೂ ವಾಸ್ತವ) -ಪೊಲೀಸರು ಲಾಠಿ ಬೀಸಿದ್ದಾರೆ. ಆದರೆ ರೈತರಿಗೆ ಹೊಡೆದಿಲ್ಲ ಎಂದು” ಬರೆದಿದ್ದರು.
ತಕ್ಷಣ ಕಾರ್ಯಪ್ರವೃತ್ತವಾದ ಫ್ಯಾಕ್ಟ್ ಚೆಕ್ ವೆಬ್ ಸೈಟ್ ಗಳು ಮಾಳವಿಯಾ ಹಾಕಿದ್ದು, ಕ್ರಾಪ್ ಮಾಡಿದ ವಿಡಿಯೋ ಎಂದು ಕಂಡು ಹಿಡಿದಿವೆ. ಅದನ್ನು ಟ್ವಿಟರ್ ಗೆ ವರದಿ ಮಾಡಿವೆ. ಅಂತಿಮವಾಗಿ ಟ್ವಿಟರ್ ಕಂಪನಿ ಮಾಳವಿಯಾ ಟ್ವೀಟ್ ಗೆ “ತಿರುಚಿದ ಸಂದೇಶ” ಎಂದು ಕೆಂಪು ಅಕ್ಷರದಲ್ಲಿ ಬರೆದು ಫ್ಲ್ಯಾಗ್ ಅಳವಡಿಸಿದೆ.