ಯಡಿಯೂರಪ್ಪ ಸರ್ಕಾರ ಸ್ಥಾಪಿಸಿರುವ ಮರಾಠಿ ಪ್ರಾಧಿಕಾರ ವಿರೋಧಿಸಿ ನಡೆಯುತ್ತಿರುವ ವಾಟಾಳ್ ನಾಗರಾಜ್ ಸೇರಿದಂತೆ ಇತರ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ ಮುಂದಿವರೆದಿದೆ. ಪ್ರಾಧಿಕಾರ ರಚನೆಯಾದಾಗಿನಿಂದಲೂ ವಾಟಾಳ್ ನಾಗಾರಜ್ ಹಾಗೂ ಇತರೆ ಕನ್ನಡ ಪರ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದನ್ನು ವಿರೋಧಿಸಿ ಡಿ.5 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಇನ್ನು ಬಂದ್ ಸಂಬಂಧ ಇಂದು ಹಾಸನದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಡಿಸೆಂಬರ್ 5ರಂದು ಕರ್ನಾಟಕ ಬಂದ್ ಯಶಸ್ವಿಯಾಗಲಿದೆ. ಎಲ್ರೂ ನಾಡುನುಡಿ ವಿಚಾರಕ್ಕೆ ಕೈ ಜೋಡಿಸಬೇಕು. ಕರ್ನಾಟಕದ ಎಲ್ಲಾ ಗಡಿಗಳನ್ನು ಬಂದ್ ಮಾಡೋಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಲಾದರು ಯಡಿಯೂರಪ್ಪನವರು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಸರ್ಕಾರ ಬಂದ್ ವಿಫಲ ಮಾಡಲು ಏನೇ ಪ್ರಯತ್ನ ಮಾಡಿದರೂ ಬಂದ್ ಯಶಸ್ವಿ ಮಾಡೇ ಮಾಡುತ್ತೇವೆ ಎಂದರು.
5ನೇ ತಾರೀಖಿನಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವೆರೆಗೆ ಬಂದ್ ನಡೆಸಲಾಗುತ್ತದೆ. ಅದ್ಯಾರು ಬಂದು ನಮ್ಮನ್ನು ತಡೆಯುತ್ತಾರೋ ನೋಡ್ತೇವೆ. ಜೈಲಿಗೆ ಕಳುಹಿಸಿದರೂ ಜೈಲಿಗೋಗೋದಿಕ್ಕೆ ನಾವು ಸಿದ್ದವಿದ್ದೇವೆ. ಇದು ಕನ್ನಡಿಗರು ಹಾಗೂ ಕನ್ನಡಕ್ಕಾಗಿ ಹೋರಾಟ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದರೂ ಇನ್ನೂ ಬುದ್ದಿ ಬಂದಿಲ್ಲ ಎಂದರು.