ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಲಾಗಿದೆ ಎಂದು ಬೆಳ್ಳಂದೂರು ಠಾಣೆಗೆ ದೂರು ನೀಡಲಾಗಿದೆ.
ಜಮೀನು ವಿಚಾರದಲ್ಲಿ ಅವರನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿ ಇಟ್ಟು ಚಿತ್ರಹಿಂಸೆ ನೀಡಲಾಗಿದೆ. ಕೋಲಾರದ ತೋಟದ ಮನೆಯಿಂದ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿದ್ದ ಅಪಹರಣಕಾರರು 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.
ಪೊಲೀಸರಿಗೆ ವರ್ತೂರು ಪ್ರಕಾಶ್ ಅವರೇ ದೂರು ನೀಡಿದ್ದು, ನವೆಂಬರ್ 25 ರಂದು ಅಪಹರಣ ಮಾಡಲಾಗಿತ್ತು. ಚಿತ್ರಹಿಂಸೆ ನಂತರ ಕೆಆರ್ ಪುರಂ ಬಳಿ ಬಿಟ್ಟು ಹೋಗಿದ್ದಾರೆ. ವರ್ತೂರು ಪ್ರಕಾಶ್ ಅವರ ಚಾಲಕ ಸುನಿಲ್ ಮೇಲೆಯೂ ಹಲ್ಲೆ ಮಾಡಲಾಗಿದ್ದು ಅವರು ಕೋಲಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ವರ್ತೂರು ಪ್ರಕಾಶ್ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ನನ್ನನ್ನು ಅಪಹರಣ ಮಾಡಲಾಗಿತ್ತು. 2 ಕೋಟಿ ರೂ.ಗೆ ಬೇಡಿಕೆ ಇಡಲಾಗಿತ್ತು ಎಂದು ವರ್ತೂರು ಪ್ರಕಾಶ್ ದೂರು ನೀಡಿದ್ದಾರೆ. ವರ್ತೂರು ಪ್ರಕಾಶ್ ಮತ್ತು ಕಾರು ಚಾಲಕ ಸುನಿಲ್ ಅವರ ಮೇಲೆ ಬೆಂಗಳೂರಿನ ಬೆಳ್ಳಂದೂರಿನಲ್ಲಿ ಹಲ್ಲೆ ಮಾಡಲಾಗಿದೆ. 8 ಜನ ಅಪಹರಣಕಾರರು ನಿರಂತರವಾಗಿ ಹಲ್ಲೆ ಮಾಡಿದ್ದಾರೆ. ಅವರು ತಮಿಳು ಮತ್ತು ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂದೆಲ್ಲಾ ಹೇಳಲಾಗಿದೆ.
ಆದರೆ, ಇಡೀ ಅಪಹರಣ ಪ್ರಕರಣ ಮತ್ತು 2 ಕೋಟಿ ರೂ.ಗೆ ಬೇಡಿಕೆ ಇಟ್ಟಿರುವುದಾಗಿ ಹೇಳಿರುವುದು, ಹಲ್ಲೆ ಮಾಡಲಾಗಿದೆ ಎಂದಿರುವುದು ಅನುಮಾನಕ್ಕೆ ಕಾರಣವಾಗಿದೆ. ವರ್ತೂರು ಪ್ರಕಾಶ್ ನಾಪತ್ತೆಯಾಗಿದ್ರೂ 3 ದಿನ ಮನೆಯವರಿಗೆ ಗೊತ್ತಿರಲಿಲ್ಲವೇ? ಅವರ ಕಾರ್ ಚಾಲಕ ಸುನಿಲ್ ಮನೆಯವರಾದರೂ ದೂರು ನೀಡಬಹುದಾಗಿತ್ತು ಎನ್ನಲಾಗಿದೆ. ಇಡೀ ಪ್ರಕರಣ ಗೊಂದಲದ ಗೂಡಾಗಿದ್ದು, ಹಣಕಾಸಿನ ವಿಚಾರವಾಗಿ ಈ ಗಲಾಟೆ ನಡೆದಿರಬಹುದೆನ್ನಲಾಗಿದ್ದು, ಪೊಲೀಸರು ವರ್ತೂರು ಪ್ರಕಾಶ್ ಅವರಿಂದ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.