ಪುಸ್ತಕಗಳು ವ್ಯಕ್ತಿಯ ಅತ್ಯುತ್ತಮ ಸ್ನೇಹಿತ ಎಂದು ಹೇಳ್ತಾರೆ. ಈ ಮಾತಿಗೆ ಪುರಾವೆ ಎಂಬಂತೆ ಮುಂಬೈನ ನಿವಾಸಿಯೊಬ್ಬರು ಪುಸ್ತಕ ಒದೋದೇ ತಮ್ಮ ಜೀವನದ ಬಹುದೊಡ್ಡ ಖುಷಿಯ ಸಂಗತಿ ಅಂತಾ ಹೇಳಿಕೊಂಡಿದ್ದಾರೆ.
ಅಂಧೇರಿಯಲ್ಲಿ ಪುಸ್ತಕಗಳ ಪುಟ್ಟ ಅಂಗಡಿಯನ್ನ ಇಟ್ಟುಕೊಂಡಿರುವ ರಾಕೇಶ್ಗೆ ಓದೋದು ಅಂದ್ರೆ ಪಂಚಪ್ರಾಣ. ಇವರ ಬಳಿ ಪುಸ್ತಕವನ್ನ ಕೇವಲ 10 ರೂಪಾಯಿ ಪಾವತಿಸಿ ಯಾರು ಬೇಕಿದ್ರೂ ಎರವಲು ಪಡೆಯಬಹುದಾಗಿದೆ. ಆದರೆ ಪುಸ್ತಕವನ್ನ ಓದಿದ ಬಳಿಕ ಗ್ರಾಹಕರು ಅದನ್ನ ಸುರಕ್ಷಿತವಾಗಿ ಹಿಂದಿರುಗಿಸಬೇಕೆಂದು ರಾಕೇಶ್ ಕೇಳಿಕೊಳ್ತಾರೆ.
ರಾಕೇಶ್ರ ಪುಸ್ತಕ ಪ್ರೇಮದ ಬಗ್ಗೆ ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ರಾಕೇಶ್ ಪ್ರಕಾರ ಜನರು ಹಣ ಮಾಡೋದೇ ತಮ್ಮ ಆಸೆಗಳನ್ನ ಈಡೇರಿಸಿಕೊಳ್ಳೋಕೆ. ರಾಕೇಶ್ ಜೀವನದ ಪರಮ ಆಸೆ ಅಂದ್ರೇನೆ ಪುಸ್ತಕಗಳನ್ನ ಓದೋದು. ನನಗೆ ಈ ಖುಷಿ ಪುಟ್ಟ ಅಂಗಡಿಯಿಂದ ಸಿಕ್ಕಿದೆ ಅಂದ್ಮೇಲೆ ನಾನ್ಯಾಕೆ ಹಣದ ಹಿಂದೆ ಹೋಗಲಿ ಅಂತಾರೆ ಸೆಕೆಂಡ್ ಹ್ಯಾಂಡ್ ಪುಸ್ತಕ ಅಂಗಡಿ ಮಾಲೀಕ ರಾಕೇಶ್.
ಲಾಕ್ಡೌನ್ ಸಂದರ್ಭದಲ್ಲಿ ಅನೇಕರು ರಾಕೇಶ್ ಜೀವನೋಪಾಯಕ್ಕೆ ಸಹಾಯ ಮಾಡಲು ಬಂದರೂ ಸಹ ಅದನ್ನ ರಾಕೇಶ್ ನಯವಾಗಿ ತಿರಸ್ಕರಿಸಿದ್ದಾರಂತೆ. ಎಡಗೈಯನ್ನೂ ಕಳೆದುಕೊಂಡಿರುವ ರಾಕೇಶ್ರ ಪುಸ್ತಕ ಪ್ರೇಮಕ್ಕೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.