ನವದೆಹಲಿ: ಕೊರೋನಾ ಲಸಿಕೆ ನೀಡಲು 1 ಲಕ್ಷ ವ್ಯಾಕ್ಸಿನೇಟರ್ ಪಡೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದ್ದು, ಒಂದು ಗಂಟೆಗೆ 25 ಮಂದಿಗೆ ಲಸಿಕೆ ನೀಡಲಾಗುತ್ತದೆ.
ಕೊರೋನಾ ಲಸಿಕೆ ಶೀಘ್ರವೇ ಬಿಡುಗಡೆಯಾಗಲಿದ್ದು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಆದ್ಯತಾ ವಲಯದವರಿಗೆ ಲಸಿಕೆ ನೀಡಲು 1 ಲಕ್ಷ ವ್ಯಾಕ್ಸಿನೇಟರ್ ಗಳನ್ನು ಸಿದ್ಧಪಡಿಸಲಾಗಿದೆ. 2021 ರ ಆರಂಭದಲ್ಲಿ ಸುಮಾರು 30 ಕೋಟಿ ಜನರಿಗೆ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದೆ. ಸರ್ಕಾರಿ ಆಸ್ಪತ್ರೆ, ಪ್ರಯೋಗಾಲಯ, ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ 70 ಸಾವಿರ ಮಂದಿ ಲಭ್ಯವಿದ್ದು, ಇವರೊಂದಿಗೆ ಖಾಸಗಿ ವಲಯದಿಂದ 30 ಸಾವಿರ ವೈದ್ಯರು, ನರ್ಸ್ ಗಳು ಹಾಗೂ ಪ್ರಯೋಗಾಲಯ ಸಿಬ್ಬಂದಿಯನ್ನು ಸಿದ್ಧಪಡಿಸಲಾಗುತ್ತಿದೆ. ಇವರೊಂದಿಗೆ ಹೆಚ್ಚುವರಿಯಾಗಿ 30 ಸಾವಿರ ಸಿಬ್ಬಂದಿ ರೆಡಿಯಾಗಲಿದ್ದಾರೆ.
ತರಬೇತಿ ಪಡೆದುಕೊಂಡು ಒಬ್ಬ ವ್ಯಾಕ್ಸಿನೇಟರ್ ಒಂದು ಗಂಟೆಗೆ 25 ಜನರಿಗೆ ಲಸಿಕೆ ನೀಡಲಿದ್ದಾರೆ. ಮೊದಲ ಹಂತದಲ್ಲಿ ಕಡಿಮೆ ಸಂಖ್ಯೆಯ ಜನರಿಗೆ ಲಸಿಕೆ ನೀಡುವುದರಿಂದ ಗಂಟೆಗೆ 25 ಮಂದಿಗೆ ಲಸಿಕೆ ನೀಡುವ ಅಗತ್ಯವಿರುವುದಿಲ್ಲ ಎಂದು ಕೂಡ ಹೇಳಲಾಗಿದೆ.