ಥ್ಯಾಂಕ್ಸ್ ಗಿವಿಂಗ್ ಕ್ಯಾಂಡಿಗಳನ್ನು ಕೊಟ್ಟ ಡಾರ್ಮಿಟರಿ ಉಸ್ತುವಾರಿ ವಿರುದ್ಧ ಚೀನಾದ ಕಾಲೇಜು ವಿದ್ಯಾರ್ಥಿಯೊಬ್ಬ ದೂರು ನೀಡುವುದಾಗಿ ಬೆದರಿಕೆ ಒಡ್ಡಿದ ಬಳಿಕ ಕಾಲೇಜ್ ಕ್ಯಾಂಪಸ್ಗಳ ಮೇಲೆ ಅಲ್ಲಿನ ಸರ್ಕಾರದ ಹಿಡಿತದ ಕುರಿತಂತೆ ಸಾಕಷ್ಟು ಚರ್ಚೆಗಳು ಶುರುವಾಗಿವೆ.
ಈಶಾನ್ಯ ಚೀನಾದಲ್ಲಿರುವ ಹರ್ಬಿನ್ ತಾಂತ್ರಿಕ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರು ಅಲ್ಲಿನ ಜನಪ್ರಿಯ ಚಾಟ್ ಪ್ಲಾಟ್ಫಾರಂ ವಿ ಚಾಟ್ನಲ್ಲಿ ಹೀಗೆ ಬರೆದಿದ್ದರು: “ಪಾಶ್ಚಾತ್ಯ ಜಗತ್ತಿನಲ್ಲಿ ಇಂದು ಥ್ಯಾಂಕ್ಸ್ ಗಿವಿಂಗ್ ದಿನ. ಈ ಸಂದರ್ಭವನ್ನು ನಾನು ಡಾರ್ಮಿಟರಿಯಲ್ಲಿರುವ ವಿದ್ಯಾರ್ಥಿಗಳು ನನ್ನ ಕೆಲಸಕ್ಕೆ ಬೆಂಬಲ ಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಲು ಬಳಸುತ್ತೇನೆ” “ಬೆಳಿಗ್ಗೆ 7:50ರಿಂದ ನಾನು ಕ್ಯಾಂಡಿಗಳನ್ನು ಲಾಬಿಯಲ್ಲಿ ಇರುವ ಮಂದಿಗೆ ಹಂಚಲಿದ್ದೇನೆ” ಎಂದು ವಾಂಗ್ ಎಂಬ ಸರ್ನೇಮ್ ಇರುವ ಮಹಿಳೆ ಚಾಕಲಟ್ ಕ್ಯಾಂಡಿಗಳಿರುವ ಎರಡು ಫೋಟೋಗಳೊಂದಿಗೆ ಪೋಸ್ಟ್ ಮಾಡಿದ್ದರು.
ಪಾಶ್ಚಾತ್ಯ ಐಡಿಯಾಗಳನ್ನು ಹೀಗೆ ಹರಡುತ್ತಿರುವ ವಿಚಾರದ ಬಗ್ಗೆ ವಿದ್ಯಾರ್ಥಿಯೊಬ್ಬ ವಿರೋಧಿಸಿ, “ದಯವಿಟ್ಟು ಇದನ್ನು ಇಲ್ಲಿಗೇ ನಿಲ್ಲಿಸಿ. ಇಲ್ಲವಾದಲ್ಲಿ ನಾನು ಶಾಲೆಯ ಸಂಬಂಧ ಪಟ್ಟ ಇಲಾಖೆಗೆ ದೂರು ನೀಡುತ್ತೇನೆ” ಎಂದಿದ್ದಾನೆ.
ಪರಿಸ್ಥಿತಿ ಹದಗೆಡುವ ಮುನ್ನವೇ ಕ್ಷಮೆಯಾಚಿಸಿದ ವಾಂಗ್, ಮುಂದಿನ ದಿನಗಳಲ್ಲಿ ಇಂಥ ಆಲೋಚನೆಗಳು ಬಂದ ಕೂಡಲೇ ಇನ್ನಷ್ಟು ಎಚ್ಚರಿಕೆಯಿಂದ ಇರುವುದಾಗಿ ತಿಳಿಸಿದ್ದಾರೆ.