ನಾಣ್ಯವೊಂದನ್ನು ಅಚಾನಕ್ಕಾಗಿ ಮೂಗಿಗೆ ತೂರಿಸಿಕೊಂಡ ರಷ್ಯಾದ ವ್ಯಕ್ತಿಯೊಬ್ಬರು ಅದನ್ನು 50 ವರ್ಷಗಳ ಬಳಿಕ ಹೊರಗೆ ತೆಗೆಸಲು ಸಫಲರಾಗಿದ್ದಾರೆ. ಮೂಗಿನ ಬಲಗಡೆಯ ಹೊಳ್ಳೆಯಲ್ಲಿ ಈ ನಾಣ್ಯ ತೂರಿಕೊಂಡಿತ್ತು.
ಕೇವಲ ಆರು ವರ್ಷ ವಯಸ್ಸಿನವರಾಗಿದ್ದ ವೇಳೆ ಈ ವ್ಯಕ್ತಿ ತಮ್ಮ ಮೂಗಿಗೆ ಈ ನಾಣ್ಯವನ್ನು ಹಾಕಿಕೊಂಡು ಬಿಟ್ಟಿದ್ದಾರೆ. ಈ ವಿಚಾರವನ್ನು ಅಮ್ಮನಿಗೆ ತಿಳಿಸಲು ಭಯಗೊಂಡು ಹಾಗೇ ಮುಚ್ಚಿಟ್ಟುಬಿಟ್ಟಿದ್ದಾರೆ.
ಇದಾದ ಐದು ದಶಕಗಳ ಮಟ್ಟಿಗೆ ಆ ನಾಣ್ಯವನ್ನು ಈತ ಮರೆತೇ ಬಿಟ್ಟಿದ್ದರು. ಇತ್ತೀಚೆಗೆ ತಮ್ಮ ಬಲ ಹೊಳ್ಳೆ ಮೂಲಕ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಆ ನಾಣ್ಯದ ಸುತ್ತಲೂ ರಿನೋಲಿತ್ಸ್ ಹೆಸರಿನ ಕಲ್ಲುಗಳು ಬೆಳೆಯಲು ಆರಂಭಿಸಿದ್ದವು. ಆಸ್ಪತ್ರೆಗೆ ಭೇಟಿ ಕೊಟ್ಟು ನಾಣ್ಯವನ್ನು ತೆಗೆಸಿದ್ದಾರೆ.
ಎಂಡೋಸ್ಕೋಪಿಕ್ ಸರ್ಜರಿ ಮಾಡಿ ಈ ನಾಣ್ಯ ಹಾಗೂ ಕಲ್ಲುಗಳನ್ನು ಹೊರತೆಗೆಯಲು ವೈದ್ಯರು ಸಫಲರಾಗಿದ್ದಾರೆ. ಸೋವಿಯತ್ ಕಾಲದ ಒಂದು ಕೋಪೆಕ್ ಮೌಲ್ಯದ ನಾಣ್ಯ ಇದಾಗಿದೆ ಎಂದು ತಿಳಿದು ಬಂದಿದೆ.