ಕೆಲವು ತಿಂಗಳ ಹಿಂದಷ್ಟೇ ನಿಧನರಾದ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ಪತ್ನಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಾಜಿದ್ ಖಾನ್ ಪತ್ನಿ ಕಮಲ್ ರುಖ್ ಖಾನ್ ಅಳಲು ತೋಡಿಕೊಂಡಿದ್ದಾರೆ.
ಮುಸ್ಲಿಂ ಧರ್ಮಕ್ಕೆ ಸೇರಿದ ವಾಜಿದ್ ಖಾನ್ ಮತ್ತು ಪಾರ್ಸಿ ಧರ್ಮಕ್ಕೆ ಸೇರಿದ ಕಮಲ್ ರುಖ್ ಅವರು ಕಾಲೇಜಿನಲ್ಲಿ ಓದುವಾಗಲೇ ಪ್ರೀತಿಸಿದ್ದು, ಅಂತರಧರ್ಮೀಯ ಮದುವೆಯಾಗಿದ್ದರು. ಮದುವೆಯ ಬಳಿಕ ಪತಿಯ ಕುಟುಂಬದವರು ಮತಾಂತರಗೊಳ್ಳುವಂತೆ ಒತ್ತಡ ಹೇರಿದಾಗ ಕಮಲ್ ರುಖ್ ನಿರಾಕರಿಸಿದ್ದರು. ಇದರಿಂದಾಗಿ ದಂಪತಿ ನಡುವೆ ಬಿರುಕು ಉಂಟಾಗಿತ್ತು.
ಕಳೆದ ಮೇ ತಿಂಗಳಲ್ಲಿ ವಾಜಿದ್ ಖಾನ್ ಮೃತಪಟ್ಟ ನಂತರ ಮತಾಂತರಗೊಳ್ಳದ ಕಾರಣ ಪತಿ ಕುಟುಂಬದವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಕಮಲ್ ರುಖ್ ಅವರು, 9 ವರ್ಷದ ಮಗ, 16 ವರ್ಷದ ಮಗಳು ಇದ್ದಾರೆ. ಮತಾಂತರಗೊಳ್ಳಲು ಸ್ವಾಭಿಮಾನ, ಘನತೆ ಅವಕಾಶ ನೀಡಲಿಲ್ಲ. ಈ ಮತಾಂತರ ಎನ್ನುವುದು ನಾನು ಅಂದುಕೊಂಡಷ್ಟು ಸುಲಭವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಎಲ್ಲಾ ಹಂತದಲ್ಲೂ ಶಿಕ್ಷಣ ಸೇರಿದಂತೆ ಸ್ವಾತಂತ್ರ್ಯಕ್ಕೆ ಹೆಚ್ಚು ಅವಕಾಶ, ಪ್ರೋತ್ಸಾಹ ನೀಡಿದ ಪಾರ್ಸಿ ಧರ್ಮ ಮದುವೆಯ ನಂತರದಲ್ಲಿ ಗಂಡನ ಕುಟುಂಬದವರಿಗೆ ದೊಡ್ಡ ಸಮಸ್ಯೆಯಾಗಿದೆ. ನಾನು ಎಲ್ಲ ಧರ್ಮದ ನಂಬಿಕೆಗಳನ್ನು ಗೌರವಿಸಿದ್ದೇನೆ ಮತ್ತು ಆಚರಿಸುತ್ತೇನೆ. ಆದರೆ ಮತಾಂತರದ ವಿಚಾರದಿಂದಾಗಿ ಸಂಬಂಧಗಳಿಗೆ ಬೆಲೆಯೇ ಇಲ್ಲವಾಗಿದೆ ಎಂದು ಹೇಳಿಕೊಂಡಿದ್ದು, ಸುದೀರ್ಘ ಬರೆಹದ ಪೋಸ್ಟ್ ಹಾಕಿದ್ದಾರೆ.