ಇಂದು ಸಿಡ್ನಿಯಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ಆರೊನ್ ಫಿಂಚ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಮತ್ತೊಮ್ಮೆ ರನ್ ಗಳ ಹೊಳೆ ಹರಿಸಿದೆ. ಆರಂಭದಲ್ಲಿ ಡೇವಿಡ್ ವಾರ್ನರ್ ನಾಯಕ ಆರೊನ್ ಫಿಂಚ್ ಭರ್ಜರಿ ಜೊತೆಯಾಟವಾಡಿದರು. ನಂತರ ನಾಯಕ ಆರೊನ್ ಫಿಂಚ್ 60 ರನ್ ಗಳಿಸಿದ್ದು, ಮೊಹಮ್ಮದ್ ಶಮಿ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.
ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಕೂಡ 83 ರನ್ ಗಳಿಸಿ ಔಟಾದರು. ಸ್ಟಿವ್ ಸ್ಮಿತ್ ಇಂದಿನ ಪಂದ್ಯದಲ್ಲೂ ಭರ್ಜರಿ ಶತಕ ಸಿಡಿಸಿದರು. ಸ್ಟಿವ್ ಸ್ಮಿತ್ 64 ಎಸೆತಗಳಲ್ಲಿ 104 ರನ್ ಗಳಿಸಿದ್ದು, ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಔಟಾದರು.
ನಂತರ ಲಾಬುಸ್ಚಾಗ್ನೆ ಹಾಗೂ ಗ್ಲೇನ್ ಮ್ಯಾಕ್ಸ್ ವೆಲ್ ಉತ್ತಮ ಪಾರ್ಟ್ನರ್ ಶಿಪ್ ಆಟವಾಡಿದ್ದು, ಲಾಬುಸ್ಚಾಗ್ನೆ 70ರನ್ ಗಳಿಸಿ 49 ನೇ ಓವರ್ ನಲ್ಲಿ ಜಸ್ ಪ್ರೀತ್ ಬುಮ್ರಾ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಗ್ಲೇನ್ ಮ್ಯಾಕ್ಸ್ ವೆಲ್ 4 ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸುವ ಮೂಲಕ ಕೇವಲ 29 ಎಸೆತಗಳಲ್ಲಿ 63 ಗಳಿಸಿ ಅಜೇಯರಾಗಿ ಉಳಿದರು. ಒಟ್ಟಾರೆ ಆಸ್ಟ್ರೇಲಿಯಾ ತಂಡ 4ವಿಕೆಟ್ ನಷ್ಟಕ್ಕೆ 389 ರನ್ ಗಳ ಬೃಹತ್ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಭಾರತ ತಂಡ ಆರಂಭದಲ್ಲಿ ಶಿಖರ್ ಧವನ್ 30 ರನ್ ಗಳಿಸಿ ಹಝಲ್ ವುಡ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಆರಂಭಿಕ ಆಟಗಾರ ಮಾಯಂಕ್ ಅಗರ್ವಾಲ್ 28 ರನ್ ಗಳಿಸಿದ್ದು, ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಔಟಾದರು. ಬಳಿಕ ಬಂದ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಜೊತೆಯಾಟದಿಂದ ತಂಡ ಸ್ವಲ್ಪ ಸುಧಾರಣೆ ಕಂಡಿತು. ಶ್ರೇಯಸ್ ಅಯ್ಯರ್ 38 ರನ್ ಗಳಿಸಿ ಹೆನ್ರಿಕ್ಸ್ ಬೌಲಿಂಗ್ನಲ್ಲಿ ಔಟಾದರು.
ನಂತರ ಟೀಂ ಇಂಡಿಯಾಗೆ ಬೆನ್ನೆಲುಬಾಗಿ ನಿಂತಿದ್ದ ನಾಯಕ ವಿರಾಟ್ ಕೊಹ್ಲಿ 89 ರನ್ ಗಳಿಸಿ ಹಝಲ್ ವುಡ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಕೆ.ಎಲ್. ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಜೊತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.
ಕೆ.ಎಲ್. ರಾಹುಲ್ 76 ರನ್ ಗಳಿಸಿದ್ದು ಆ್ಯಡಂ ಝಂಪಾ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಸತತ ವಿಕೆಟ್ ಗಳನ್ನು ಕಳೆದುಕೊಂಡ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿ ಗುರಿ ತಲುಪುವಲ್ಲಿ ವಿಫಲವಾಯಿತು. ಆಸ್ಟ್ರೇಲಿಯಾ ತಂಡ 51 ರನ್ ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಆಸ್ಟ್ರೇಲಿಯಾ ತಂಡ ಮೂರು ಏಕದಿನ ಸರಣಿಯಲ್ಲಿ 2-0 ಮುನ್ನಡೆಯಿಂದ ಸರಣಿಯನ್ನು ವಶಪಡಿಸಿಕೊಂಡಿದೆ.