ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ರಾಜ್ಯದಲ್ಲಿರುವ ಅನೇಕ ಊರುಗಳಿಗೆ ಅವುಗಳ ಪೌರಾಣಿಕ ಹೆಸರುಗಳನ್ನು ಇಟ್ಟು ಮರುನಾಮಕರಣ ಮಾಡಿ ಖ್ಯಾತಿ ಗಳಿಸಿದ್ದಾರೆ.
ಇದೀಗ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಅಗ್ರ ಪ್ರಚಾರಕರಾಗಿ ಕಾಣಿಸಿಕೊಳ್ಳುತ್ತಿರುವ ಯೋಗಿ ಆದಿತ್ಯನಾಥ್ ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಹಾಗೂ ಅಸಾದುದ್ದೀನ್ ಓವೈಸಿಯ ಪಕ್ಷಗಳು ಸೇರಿಕೊಂಡು ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ಗಂಭೀರ ಆಪಾದನೆ ಮಾಡಿದ್ದಾರೆ.
ಇದೇ ವೇಳೆ ಹೈದರಾಬಾದ್ ನಗರದ ಹೆಸರಿನ ಮರುನಾಮಕರಣದ ಬಗ್ಗೆ ಮಾತನಾಡಿದ ಯೋಗಿ, “ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಲು ಸಾಧ್ಯವಿಲ್ಲವೇ ಎಂದು ಕೆಲ ಜನರು ನನ್ನನ್ನು ಕೇಳುತ್ತಿದ್ದಾರೆ. ಫೈಜಾಬಾದ್ ಅನ್ನು ಅಯೋಧ್ಯೆ ಎಂದೂ ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದೂ ನಾವು ಮರುನಾಮಕರಣ ಮಾಡಿರುವಾಗ ಹೈದರಾಬಾದ್ ಅನ್ನು ಭಾಗ್ಯ ನಗರವೆಂದು ಮರು ನಾಮಕರಣ ಮಾಡಲು ಏಕೆ ಸಾಧ್ಯವಿಲ್ಲ?” ಎಂದು ರ‍್ಯಾಲಿಯಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಪ್ರಶ್ನಿಸಿದ್ದಾರೆ.
“ಬಿಹಾರದಲ್ಲಿ ಹೊಸದಾಗಿ ಆಯ್ಕೆಗೊಂಡ ಶಾಸಕರೊಬ್ಬರು ಪ್ರಮಾಣ ವಚನ ಸ್ವೀಕರಿಸುವ ವೇಳೆ ’ಹಿಂದೂಸ್ತಾನ’ ಎಂದು ಹೇಳಲು ನಿರಾಕರಿಸಿದ್ದಾರೆ. ಅವರೆಲ್ಲಾ ಹಿಂದೂಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಆದರೆ ಪ್ರಮಾಣವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ ಹಿಂದೂಸ್ತಾನ ಎನ್ನಲು ಅವರಿಗೆ ಆಗುವುದಿಲ್ಲ” ಎಂದು ಹೈದರಾಬಾದ್ ನಗರದ ಹಳೆಯ ನಗರ ಪ್ರದೇಶದ ಲಾಲ್ ದರ್ವಾಜಾ ಪ್ರದೇಶದಲ್ಲಿ ಮಾತನಾಡುತ್ತಾ ಯೋಗಿ ತಿಳಿಸಿದ್ದಾರೆ.