ಕೊರೊನಾ ವೈರಸ್ ಪತ್ತೆ ಪರೀಕ್ಷೆಯ ವಿಶ್ವಾಸಾರ್ಹತೆ ಕುರಿತಂತೆ ಸಾಕಷ್ಟು ವರದಿಗಳು ವೈರಲ್ ಆಗಿವೆ. ರೋಗ ಲಕ್ಷಣಗಳೇ ಇರದ ಮಂದಿಯಲ್ಲೂ ಸಹ ಈ ವೈರಸ್ ಇದೆ ಎಂದು ತೋರುವ ಪರೀಕ್ಷಾ ಫಲಿತಾಂಶಗಳು ಜಗತ್ತಿನಾದ್ಯಂತ ಜನತೆಯ ನಂಬಿಕೆಯನ್ನೇ ಪರೀಕ್ಷೆ ಮಾಡುತ್ತಿವೆ.
ಬ್ರಿಟನ್ನಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾದ ಸಾವಿರಾರು ಮಂದಿಯ ಪೈಕಿ 1,311 ಜನರಿಗೆ ವೈರಸ್ ಇದೆ ಎಂಬ ತಪ್ಪು ವರದಿಯನ್ನು ನೀಡಲಾಗಿದೆ. ನವೆಂಬರ್ 19-23ರ ನಡುವಿನ ಅವಧಿಯಲ್ಲಿ ಈ ಪರೀಕ್ಷೆಗಳನ್ನು ಮಾಡಲಾಗಿದೆ.
“ಈ ಎಲ್ಲಾ ಜನರಿಗೆ ವೈರಸ್ ಪರೀಕ್ಷೆಯ ತಪ್ಪು ವರದಿ ಕೊಡಲಾಗಿದೆ ಎಂಬುದನ್ನು ತಿಳಿಸಲು ತ್ವರಿತವಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಅವರಿಗೆ ಮತ್ತೊಂದು ಪರೀಕ್ಷೆಯಲ್ಲಿ ಭಾಗಿಯಾಗಲು ತಿಳಿಸಲಾಗಿದೆ” ಎಂದು ಬ್ರಿಟನ್ನ ರಾಷ್ಟ್ರೀಯ ಆರೋಗ್ಯ ಸೇವೆಯ ವಕ್ತಾರರು ತಿಳಿಸಿದ್ದಾರೆ. ಬಿಲಿಯನ್ಗಟ್ಟಲೇ ಡಾಲರ್ ವ್ಯಯಿಸುತ್ತಿರುವ ಬ್ರಿಟನ್ ತನ್ನೆಲ್ಲಾ ಪ್ರಜೆಗಳಿಗೂ ಕೋವಿಡ್-19 ಪತ್ತೆ ಪರೀಕ್ಷೆ ಮಾಡಲು ಮುಂದಾಗಿದೆ.