ನವದೆಹಲಿ: ದೇಶದ ಬಹುಪಾಲು ನಾಗರಿಕರ ಮೇಲೆ ಹೆಚ್ಚು ಪರಿಣಾಮ ಬೀರಬಹುದಾದ ಕೆಲವು ಬದಲಾವಣೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಎಲ್ಪಿಜಿ ಬೆಲೆಯಿಂದ ಆರ್.ಟಿ.ಜಿ.ಎಸ್. ಸಮಯದವರೆಗೆ ಡಿಸೆಂಬರ್ 1 ರಿಂದ ಕೆಲವು ಬದಲಾವಣೆಯಾಗಲಿವೆ. ಡಿಸೆಂಬರ್ ನಲ್ಲಿ ಕೆಲವು ನಿರ್ಣಾಯಕ ಬದಲಾವಣೆ ನಡೆಯಲಿದ್ದು, ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀರುತ್ತವೆ.
RTGS ವೇಳಾಪಟ್ಟಿ ಬದಲು
ಆರ್.ಟಿ.ಜಿ.ಎಸ್. ವೇಳಾಪಟ್ಟಿಯಲ್ಲಿ ಬದಲಾವಣೆಯಾಗಲಿದೆ. ಬ್ಯಾಂಕ್ ಕೆಲಸದ ದಿನಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಆರ್.ಟಿ.ಜಿ.ಎಸ್. ಸೇವೆ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.
ಪ್ರೀಮಿಯಂ ಮೊತ್ತ ಬದಲಾವಣೆ
ವಿಮೆದಾರರಿಗೆ ಪ್ರೀಮಿಯಂ ಮೊತ್ತವನ್ನು ಶೇಕಡ 50 ರಷ್ಟು ಕಡಿಮೆ ಮಾಡಲು ಡಿಸೆಂಬರ್ ನಿಂದ ಅವಕಾಶ ಕಲ್ಪಿಸಲಾಗಿದೆ. ವಿಮೆ ಹೊಂದಿರುವವರು ಕೇವಲ ಅರ್ಧದಷ್ಟು ಕಂತುಗಳೊಂದಿಗೆ ತಮ್ಮ ಪಾಲಿಸಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಹೊಸ ರೈಲುಗಳ ಸಂಚಾರ
ಡಿಸೆಂಬರ್ 1 ರಿಂದ ಹೊಸ ರೈಲುಗಳು ಸಂಚಾರ ಆರಂಭಿಸಲಿವೆ. ಪಂಜಾಬ್ ಮೇಲ್, ಜೀಲಂ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಆರಂಭವಾಗಲಿದೆ. ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅನೇಕ ರೈಲುಗಳ ಸೇವೆ ಸ್ಥಗಿತಗೊಂಡಿತ್ತು. ದೇಶವು ಅನ್ಲಾಕ್ ಹಂತದಲ್ಲಿದ್ದು, ಹೆಚ್ಚಿನ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಸಾಮಾನ್ಯ ವೇಳಾಪಟ್ಟಿಯ ಅನ್ವಯ ಹೆಚ್ಚು ರೈಲುಗಳು ಸಂಚಾರ ಡಿಸೆಂಬರ್ ನಿಂದ ಶುರುವಾಗಲಿದೆ.
ಎಲ್ಪಿಜಿ ಬೆಲೆ ಬದಲಾಗಬಹುದು
ಭಾರತದಲ್ಲಿ ಪ್ರತಿ ತಿಂಗಳು ಎಲ್ಪಿಜಿ ಬೆಲೆಯನ್ನು ಸರ್ಕಾರಿ ತೈಲಕಂಪನಿಗಳು ಪರಿಷ್ಕರಿಸುತ್ತವೆ. ಡಿಸೆಂಬರ್ ನಲ್ಲಿ ಅಡುಗೆ ಅನಿಲದ ಬೆಲೆ ಬದಲಾಗಲಿದೆ. ಭಾರತದಲ್ಲಿ ಬಹುಪಾಲು ಕುಟುಂಬಗಳು ಎಲ್ಪಿಜಿ ಸಂಪರ್ಕ ಹೊಂದಿರುವುದರಿಂದ ಈ ಬದಲಾವಣೆ ಮುಖ್ಯವಾಗಿರುತ್ತದೆ. ಎಲ್ಪಿಜಿ ಬೆಲೆಯನ್ನು ಮತ್ತಷ್ಟು ತಗ್ಗಿಸುವ ಮೂಲಕ ಈ ತಿಂಗಳು ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಎಲ್ಪಿಜಿ ಬೆಲೆ ಏರಿಕೆಯಾದರೆ ಜನಸಾಮಾನ್ಯರ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಜನ ಸಂಕಷ್ಟದಲ್ಲಿದ್ದು, ಎಲ್ಪಿಜಿ ಬೆಲೆಗಳನ್ನು ಹೆಚ್ಚಳ ಮಾಡದೆ ಹಾಗೆಯೇ ಉಳಿಸಿಕೊಳ್ಳಲಾಗುವುದು ಎನ್ನಲಾಗಿದೆ.