ಔರಂಗಾಬಾದ್: ಮಾನವ-ವನ್ಯಜೀವಿ ಸಂಘರ್ಷದ ಮತ್ತೊಂದು ಘಟನೆಯಲ್ಲಿ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಚಿರತೆಯೊಂದು ಬಾಲಕನ ಕೊಂದು ಹಾಕಿದೆ.
ಬೀಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ 10 ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿದ್ದು, ಹುಡುಕಾಟದ ನಂತರ ಪೊದೆಯಲ್ಲಿ ಅರ್ಧಂಬರ್ಧ ಮೃತದೇಹ ಕಂಡು ಬಂದಿದೆ. ಬೀಡ್ ಜಿಲ್ಲೆಯ ಅಷ್ಟಿ ತಾಲೂಕಿನ ಚಿನ್ಹಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬಾಲಕ ಜಮೀನಿನಲ್ಲಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ಮಾಡಿದ ಚಿರತೆ ಆತನನ್ನು ಎಳೆದುಕೊಂಡು ಹೋಗಿದೆ. ಬಾಲಕ ಕೂಗಾಡಿದಾಗ ಸುತ್ತಮುತ್ತಲಿನ ರೈತರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಚಿರತೆ ಆತನನ್ನು ಒಂದೂವರೆ ಕಿಲೋಮೀಟರ್ ದೂರದವರೆಗೂ ಎಳೆದುಕೊಂಡು ಹೋಗಿದೆ. ಸುಮಾರು ಎರಡು ತಾಸು ಹುಡುಕಾಟದ ನಂತರ ಪೊದೆಯೊಂದರಲ್ಲಿ ಬಾಲಕನ ಮೃತದೇಹ ಕಂಡು ಬಂದಿದೆ. ಆತನ ಕುತ್ತಿಗೆ ಹಾಗೂ ಇತರೆ ಭಾಗಗಳನ್ನು ಚಿರತೆ ತಿಂದು ಹಾಕಿರುವುದು ಕಂಡು ಬಂದಿದೆ.
ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಪೊಲೀಸರ ನೆರವಿನೊಂದಿಗೆ ಡ್ರೋನ್ ಕ್ಯಾಮೆರಾ ಸಹಾಯದಿಂದ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿದೆ.