ಕಾರವಾರ: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಗುಸುಗುಸು ಸುದ್ದಿಗಳು ಹರಿದಾಡುತ್ತಿವೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ರಹಸ್ಯ ವಿಡಿಯೋ ಕಾರಣ. ಯಾವುದೋ ರಹಸ್ಯ ವಿಡಿಯೋ ಒಂದನ್ನು ಸಂತೋಷ್ ಎಂಎಲ್ಸಿ ಹಾಗೂ ಸಚಿವರಿಗೆ ನೀಡಿದ್ದಾರೆ. ಹೈಕಮಾಂಡ್ ಗೂ ಈ ವಿಡಿಯೋ ಎತ್ತಿಕೊಂಡು ಹೋಗಿ ಕೊಟ್ಟಿದ್ದಾರೆ ಎಂಬ ಮಾಹಿತಿ ಬಂದಿತ್ತು. ಆ ವಿಡಿಯೋವನ್ನಿಟ್ಟುಕೊಂಡು ಆ ಎಂಎಲ್ಸಿ ಹಾಗೂ ಸಚಿವರು, ಸಂತೋಷ್ ಹಾಗೂ ಸಿಎಂ ಇಬ್ಬರಿಗೂ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾರೆ ಎಂಬ ವಿಚಾರ ಕಳೆದ ಎರಡು ಮೂರು ತಿಂಗಳಿಂದ ಕೇಳಿಬಂದಿತ್ತು. ಇದೇ ಕಾರಣಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರಬಹುದು. ಆದರೆ ಸತ್ಯಾಂಶ ಏನಿದೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ಅವರು ಮಾದಕ ದ್ರವ್ಯದಿಂದ ಸರ್ಕಾರ ನಡೆಸುತ್ತಿದ್ದರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಕಟೀಲ್ ಗೆ ಏನೋ ಹೆಚ್ಚು ಕಡಿಮೆಯಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಬೇಕು. ಸರ್ಕಾರವನ್ನು ಮಾದಕ ದ್ರವ್ಯದಿಂದ ನಡೆಸುತ್ತಿದ್ದಾರೆ ಎಂದಾದರೆ ಇವರು ಎಫ್. ಐ.ಆರ್. ಏಕೆ ಮಾಡಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಕಟೀಲ್ ಆ ಸ್ಥಾನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.