ಬೆಂಗಳೂರು: ಮದುವೆ ಮಾಡಿಕೊಳ್ಳುವುದಾಗಿ ಯುವತಿಗೆ ವಂಚಿಸಿದ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೆಹಲಿ ಮೂಲದ ರೂಪಂ ಕುಮಾರ್ ದಾಸ್ ಎಂಬುವವನ ವಿರುದ್ಧ ವಂಚನೆ ಆರೋಪದಡಿ ದೂರು ದಾಖಲಾಗಿದೆ. ವಿವಾಹ ಸಂಬಂಧಿತ ವೆಬ್ಸೈಟ್ ಮೂಲಕ ಪರಿಚಿತನಾಗಿದ್ದ ರೂಪಂ ಕುಮಾರ್ ಯುವತಿಯಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದಾನೆ. ಅಲ್ಲದೇ, ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ.
ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಯುವತಿಯನ್ನು ಮನೆಯಲ್ಲಿ ಕೂಡಿ ಹಾಕಿ ಚಿನ್ನಾಭರಣ, ವಸ್ತುಗಳು, ಹಣ ದೋಚಿ ಪರಾರಿಯಾಗಿದ್ದಾನೆ. ಉತ್ತರ ಭಾರತ ಮೂಲದ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕನ್ನಮಂಗಲದ ಅಪಾರ್ಟ್ಮೆಂಟ್ ವೊಂದರಲ್ಲಿ ಸಹೋದರಿಯೊಂದಿಗೆ ವಾಸವಾಗಿದ್ದಾರೆ.
ವಿವಾಹ ಸಂಬಂಧಿತ ವೆಬ್ಸೈಟ್ನಲ್ಲಿ ಪರಿಚಿತನಾಗಿದ್ದ ಆರೋಪಿ ವಾಟ್ಸಪ್ ಚಾಟ್, ವಿಡಿಯೋ ಕಾಲ್ ಮಾಡುತ್ತಿದ್ದ. ತನ್ನ ಖಾತೆಗೆ 1.22 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ. ನಂತರ ತಾಯಿ ಮೃತಪಟ್ಟಿರುವುದಾಗಿ 20 ಸಾವಿರ ರೂಪಾಯಿ ಪಡೆದುಕೊಂಡಿದ್ದ. ಲಾಕ್ಡೌನ್ ಮುಗಿದ ನಂತರ ಗುವಾಹಟಿಯಲ್ಲಿ ಭೇಟಿಯಾಗಿ 23 ಸಾವಿರ ರೂಪಾಯಿ ಪಡೆದುಕೊಂಡಿದ್ದ.
ನವೆಂಬರ್ 20 ರಂದು ಸಂಬಂಧಿಕರ ಮನೆಗೆ ಪೂಜೆಗೆ ಹೋಗಬೇಕಿದ್ದ ಹಿನ್ನೆಲೆಯಲ್ಲಿ ಆತನನ್ನು ಮನೆಯಲ್ಲಿ ಉಳಿಸಿಕೊಂಡಿದ್ದಾರೆ. ಆಗ ತಡರಾತ್ರಿ 7.90 ಲಕ್ಷ ರೂಪಾಯಿ ನಗದು, ಲ್ಯಾಪ್ಟಾಪ್, ಮೊಬೈಲ್, ವಾಚ್, ಬ್ಲೂಟೂತ್, DSLR ಕ್ಯಾಮೆರಾ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಮನೆಯಲ್ಲಿ ಯುವತಿ ಕೂಡಿಹಾಕಿ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.