ಬೆಂಗಳೂರು: ಸಾಹುಕಾರ್ ವಿರುದ್ಧವೇ ಮಿತ್ರ ಮಂಡಳಿ ಸದಸ್ಯರು ಸಿಡಿದೆದ್ದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇವತ್ತು ರಾತ್ರಿ ಬೆಂಗಳೂರಿನಲ್ಲಿ ಮಿತ್ರಮಂಡಳಿ ಶಾಸಕರು ಸಭೆ ಸೇರಲಿದ್ದಾರೆ.
10 ಕ್ಕೂ ಹೆಚ್ಚು ಮಂದಿ ಬಿಜೆಪಿ ಶಾಸಕರು ಸಭೆ ಸೇರಲಿದ್ದಾರೆ. ಈ ಹಿಂದೆ 17 ಜನ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇಷ್ಟು ದಿನ ರಮೇಶ್ ಜಾರಕಿಹೊಳಿ ಮಿತ್ರಮಂಡಳಿಯ ನೇತೃತ್ವ ವಹಿಸಿಕೊಂಡಿದ್ದರು. ಈಗ ಅವರನ್ನೇ ಹೊರತುಪಡಿಸಿ ಪ್ರತ್ಯೇಕವಾಗಿ ಸಭೆ ಸೇರುತ್ತಿದ್ದಾರೆ ಎಂದು ಹೇಳಲಾಗಿದೆ.
ರಾತ್ರಿ ಖಾಸಗಿ ಹೋಟೆಲ್ ನಲ್ಲಿ ಸಚಿವರು, ಶಾಸಕರ ಸಭೆ ನಡೆಯಲಿದೆ. ರಮೇಶ್ ಜಾರಕಿಹೊಳಿ ದೆಹಲಿ ಮಟ್ಟದಲ್ಲಿ ಪ್ರಭಾವಿ ನಾಯಕರಾಗಲು ತಮ್ಮ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂಬ ಅಸಮಾಧಾನ ಶಾಸಕರಲ್ಲಿದೆ. ಈ ವಿಚಾರದ ಜೊತೆಗೆ ವಿಧಾನ ಪರಿಷತ್ ಸದಸ್ಯರಾದ ಮಿತ್ರಮಂಡಳಿ ಸದಸ್ಯರಿಗೆ ಸಚಿವ ಸ್ಥಾನ ವಿಳಂಬ ಮೊದಲಾದ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.