ಮೈಸೂರು: ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಳ್ಳಿನ ಮೇಲೆ ಪಂಚೆ ಹಾಕಿದ್ದಾರೆ. ಬುದ್ಧಿವಂತಿಕೆಯಿಂದ ಪಂಚೆ ಹರಿಯದಂತೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಅಧಿಕಾರ ಬಂದ ಮೇಲೆ ಬದಲಾಗುವುದು ಸಹಜ. ಹಾಗಾಗಿ ಯಡಿಯೂರಪ್ಪ ಬದಲಾಗಿಲ್ಲ ಎನ್ನುವುದು ಕಷ್ಟ. ನಿಗಮ ಮಂಡಳಿ ನೇಮಕಾತಿಯಲ್ಲಿ ಅಸಮಾಧಾನವಿತ್ತು. ಎಲ್ಲರನ್ನೂ ಕೇಳಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಯಡಿಯೂರಪ್ಪ ಅಧಿಕಾರದಲ್ಲಿರುವುದು ಇನ್ನು ಎರಡು ವರ್ಷ ಮಾತ್ರ ಅಷ್ಟರಲ್ಲಿ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂದರು.
ಸಿಎಂ ಎಂದ ಮೇಲೆ ಒತ್ತಡ ಇರುತ್ತೆ. ಯಡಿಯೂರಪ್ಪನವರು ಬುದ್ಧಿವಂತಿಕೆಯಿಂದ, ತಾಳ್ಮೆಯಿಂದ ನಡೆದುಕೊಳ್ಳಬೇಕು. ಸಿದ್ದರಾಮಯ್ಯನವರಿಗೆ ಅಧಿಕಾರವಿತ್ತು. ಆದರೆ ಬುದ್ಧಿವಂತಿಕೆ ಇರಲಿಲ್ಲ. ಹಾಗಾಗಿ ಅಧಿಕಾರ ಕಳೆದುಕೊಳ್ಳಬೇಕಾಯ್ತು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.