ನವದೆಹಲಿ: ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ(ಎಐಬಿಇಎ) ನವೆಂಬರ್ 26 ರ ಇಂದು ನಡೆಯಲಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬೆಂಬಲ ನೀಡಿರುವುದರಿಂದ ಕೆಲವು ಪ್ರದೇಶಗಳಲ್ಲಿನ ಬ್ಯಾಂಕ್ ಕಾರ್ಯಾಚರಣೆಗಳು ವ್ಯತ್ಯಯವಾಗುವ ಸಾಧ್ಯತೆ ಇದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಹೊರತುಪಡಿಸಿ ಬಹುಪಾಲು ಬ್ಯಾಂಕುಗಳನ್ನು ಎಐಬಿಇಎ ಪ್ರತಿನಿಧಿಸುತ್ತದೆ. ಇದು ವಿವಿಧ ಸಾರ್ವಜನಿಕ ಮತ್ತು ಹಳೆಯ ಖಾಸಗಿ ವಲಯದ ನಾಲ್ಕು ಲಕ್ಷ ಬ್ಯಾಂಕ್ ಉದ್ಯೋಗಿಗಳನ್ನು ಮತ್ತು ಕೆಲವು ವಿದೇಶಿ ಬ್ಯಾಂಕುಗಳನ್ನು ಸದಸ್ಯರನ್ನಾಗಿ ಹೊಂದಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ವಿದೇಶಿ ಬ್ಯಾಂಕುಗಳ ಬಹುತೇಕ ಉದ್ಯೋಗಿಗಳು ಮುಷ್ಕರದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಬ್ಯಾಂಕ್ ಖಾಸಗೀಕರಣಕ್ಕೆ ವಿರೋಧ, ಹೊರಗುತ್ತಿಗೆ ಮತ್ತು ಗುತ್ತಿಗೆ ವ್ಯವಸ್ಥೆಗೆ ವಿರೋಧ, ಸಮರ್ಪಕ ನೇಮಕಾತಿ, ದೊಡ್ಡ ಕಾರ್ಪೊರೇಟ್ ಡೀಫಾಲ್ಟರ್ಗಳ ವಿರುದ್ಧ ಕಠಿಣ ಕ್ರಮ, ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಳ ಮತ್ತು ಸೇವಾ ಶುಲ್ಕ ಕಡಿತ ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ಎಐಇಬಿಇಎ ತಿಳಿಸಿದೆ.