ಲಂಡನ್: ವೇಗವಾಗಿ ಚಲಿಸುತ್ತಿರುವ ಸೂಪರ್ ಫಾಸ್ಟ್ ರೈಲಿನ ಎದುರು ವ್ಯಕ್ತಿಯೊಬ್ಬ ಜಾಗಿಂಗ್ ಮಾಡಿಕೊಂಡು ಹೋದ ವಿಡಿಯೋವೊಂದು ನೆಟ್ಟಿಗರ ನಿದ್ದೆಗೆಡಿಸಿದೆ. ಟ್ವಿಟ್ಟರ್ ನಲ್ಲಿ ನ.17 ರಂದು ಅಪ್ ಲೋಡ್ ಆದ ವಿಡಿಯೋ ನೋಡಿದ ಜನ ವ್ಯಕ್ತಿಯ ಮೂರ್ಖತನ ನೋಡಿ ಆತನಿಗೆ ಜಾಲತಾಣದಲ್ಲೇ ಉಗಿದು ಮಂತ್ರಾಕ್ಷತೆ ಕೊಟ್ಟಿದ್ದಾರೆ.
ನೆಟ್ವರ್ಕ್ ರೈಲ್ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಅಪ್ ಲೋಡ್ ಮಾಡಲಾಗಿದೆ. “ಪ್ರಶ್ನೆ:ಯಾವಾಗ ಓಡುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ…? ಉತ್ತರ:ನೀವು ರೈಲಿನ ಎದುರಿಗೆ ಓಡುವಾಗ. “ಮೂರ್ಖತನದ ಪರಮಾವಧಿ” ಎಂದು ಕ್ಯಾಪ್ಶನ್ ನೀಡಲಾಗಿದೆ.
ಲಂಡನ್ ನಿಂದ ಆಕ್ಸ್‌ಫರ್ಡ್ ನಡುವಿನ ಚಿಲ್ಟ್ರನ್ ರೈಲ್ವೆ ಮಾರ್ಗದಲ್ಲಿ ನ.6 ರಂದು ಬೆಳಗ್ಗೆ 8.30 ರ ಹೊತ್ತಿಗೆ ಘಟನೆ ನಡೆದಿದೆ. ಬೆಳಗಿನ ಜಾಗಿಂಗ್ ಮಾಡುವ ವ್ಯಕ್ತಿಯೊಬ್ಬ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಅತ್ತಿತ್ತ ನೋಡದೇ ರೈಲ್ವೆ ಹಳಿ ದಾಟಿ ಹೋಗುತ್ತಾನೆ.
ರೈಲಿನಲ್ಲಿರುವ ಕ್ಯಾಮರಾದಲ್ಲಿ ಅದು ಸೆರೆಯಾಗಿದೆ. ರೈಲಿನಿಂದ ಕೆಲವೇ ಮೀಟರ್ ದೂರದಲ್ಲಿ ಆತ ಹಾದು ಹೋಗಿದ್ದು, ಕೆಲವೇ ಸೆಕೆಂಡ್ ವಿಳಂಬವಾದರೂ ರೈಲು ಆತನಿಗೆ ಹೊಡೆಯುವ ಸಂಭವವಿತ್ತು. ಈ ಮಾರ್ಗದಲ್ಲಿ ಪ್ರತಿ ದಿನ 121 ಕ್ಕೂ ಅಧಿಕ ರೈಲುಗಳು ಓಡಾಡುತ್ತವೆ. ಇದರಿಂದ ಹಳಿ ದಾಟುವ ಮೊದಲು ನಿಂತು ಎರಡೂ ಕಡೆ ನೋಡಿ. ಮುಖ್ಯವಾಗಿ ನಿಮ್ಮ ಇಯರ್ ಫೋನನ್ನು ಕಿವಿಯಿಂದ ತೆಗೆಯಿರಿ ಎಂದು ಲಂಡನ್ ರೈಲ್ವೆ ಇಲಾಖೆ ಸಲಹೆ ನೀಡಿದೆ.