ದೇಶದೆಲ್ಲೆಡೆ ಚಳಿಗಾಲ ವ್ಯಾಪಿಸುತ್ತಿರುವಂತೆಯೇ ಒಡಿಶಾದ ಭಿತರ್‌ಕಾನಿಕಾ ರಾಷ್ಟ್ರೀಯ ಉದ್ಯಾನದಲ್ಲಿರುವ ಅಳಿವೆ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಪಕ್ಷಿಗಳು ಆಗಮಿಸಲಾರಂಭಿಸಿವೆ.
ಇಲ್ಲಿನ ಕೇಂದ್ರಪಾಡ ಜಿಲ್ಲೆಯಲ್ಲಿರುವ ಈ ಪಕ್ಷಿಧಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳು ನೆರೆಯಲಾರಂಭಿಸಿವೆ. ಚಳಿಗಾಲ ಇನ್ನೂ ಈಗಷ್ಟೇ ಆರಂಭಗೊಂಡರೂ ಸಹ ಇಲ್ಲಿನ ರಾಜನಾಗರ ಅಳಿವೆ ಪ್ರದೇಶದಲ್ಲಿ 15 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ನೆರೆದಿವೆ ಎಂದು ಅರಣ್ಯಾಧಿಕಾರಿ ಬಿಕಾಶ್ ರಂಜನ್ ದಾಸ್ ತಿಳಿಸಿದ್ದಾರೆ. ಇವುಗಳ ಪೈಕಿ ಕೇಂದ್ರ ಏಷ್ಯಾದಿಂದ ಬಹಳಷ್ಟು ಸಂಖ್ಯೆಯಲ್ಲಿ ಪಕ್ಷಿಗಳು ಆಗಮಿಸಿವೆ.
ಉತ್ತರ ಗೋಳಾರ್ಧದಲ್ಲಿ ಮೈ ಥರಗುಟ್ಟುವ ಚಳಿ ಇರುವ ಕಾರಣದಿಂದ ಇಲ್ಲಿನ ಭಿತರ್ಕಾನಿಕಾ ಹಾಗೂ ಚಿಲಿಕಾ ಅಳಿವೆ ಪ್ರದೇಶಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಆಗಮಿಸುತ್ತವೆ. ಈ ಪ್ರದೇಶದಲ್ಲಿ ಯಥೇಚ್ಛವಾಗಿ ಆಹಾರ ಸಿಗುವ ಕಾರಣ ಪಕ್ಷಿಗಳು ಇತ್ತ ಆಕರ್ಷಿತಗೊಳ್ಳುತ್ತವೆ ಎಂದು ಈ ಅಧಿಕಾರಿ ತಿಳಿಸಿದ್ದಾರೆ.