ಬೆಂಗಳೂರು: ಶುಲ್ಕ ಪಾವತಿಸದಿದ್ದರೆ ಆನ್ಲೈನ್ ಕ್ಲಾಸ್ ಬಂದ್ ಮಾಡುವುದಾಗಿ ಖಾಸಗಿ ಶಾಲೆಗಳು ಹೇಳಿದ್ದು, ಸರ್ಕಾರದ ಆದೇಶಕ್ಕೆ ಸಡ್ಡು ಹೊಡೆದಿವೆ. ನೀರು, ವಿದ್ಯುತ್ ಬಿಲ್ ನಲ್ಲಿ ರಿಯಾಯಿತಿ ನೀಡಬೇಕೆಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಒತ್ತಾಯಿಸಿವೆ.
ವಿದ್ಯಾರ್ಥಿಗಳು ಶುಲ್ಕ ಪಾವತಿಸದಿದ್ದರೆ ಶಿಕ್ಷಕರಿಗೆ ವೇತನ ನೀಡಲು, ಆನ್ಲೈನ್ ಶಿಕ್ಷಣ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಶುಲ್ಕ ಪಡೆಯದಿದ್ದರೆ ಖಾಸಗಿ ಶಾಲೆಗಳನ್ನು ಮುಚ್ಚಬೇಕಾಗುತ್ತದೆ. ಹೀಗಾಗಿ ಶುಲ್ಕ ವಸೂಲಿ ಅನಿವಾರ್ಯವೆಂದು ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಡಿ. ಶಶಿಕುಮಾರ್ ಹೇಳಿದ್ದಾರೆ.
ಶುಲ್ಕ ಪಾವತಿಸಿಲ್ಲ ಎಂಬ ಕಾರಣ ನೀಡಿ ಆನ್ಲೈನ್ ಶಿಕ್ಷಣ ನಿಲ್ಲಿಸಬಾರದು ಎಂಬ ಸರ್ಕಾರದ ನಿರ್ದೇಶನವನ್ನು ಖಾಸಗಿ ಶಾಲೆಗಳು ಒಪ್ಪಿಲ್ಲ. ಖರ್ಚು, ವೆಚ್ಚ ಸರಿದೂಗಿಸಲು ಶುಲ್ಕ ಪಡೆಯಬೇಕಿದೆ ಎಂದು ಹೇಳಿವೆ.
ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳ ನೆರವಿಗೆ ಸರ್ಕಾರ ಮುಂದಾಗಬೇಕು. ವಿದ್ಯುತ್, ನೀರಿನ ಬಿಲ್ ನಲ್ಲಿ ರಿಯಾಯಿತಿ ನೀಡಬೇಕು. ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶ ಪಡೆದ ಮಕ್ಕಳ ಶುಲ್ಕ ಪಾವತಿಸಬೇಕು ಎಂದು ಒತ್ತಾಯಿಸಲಾಗಿದೆ.