ಬಡ ಜನತೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸರ್ಕಾರ ಜಾರಿಗೊಳಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ʼಸಪ್ತಪದಿʼಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಡಿಸೆಂಬರ್ 2, 7 ಮತ್ತು 10 ರಂದು ಈ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ಧಾರ್ಮಿಕ ದತ್ತಿ ಇಲಾಖೆ ನಿರ್ಧರಿಸಿದೆ.
2019 ರಲ್ಲಿ ರಾಜ್ಯ ಸರ್ಕಾರ ʼಸಪ್ತಪದಿʼ ಯೋಜನೆಯನ್ನು ಘೋಷಿಸಿದ್ದು, 2020 ರ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವಿವಾಹ ನಿಗದಿಪಡಿಸಲಾಗಿತ್ತು. ಇದಕ್ಕಾಗಿ 1500 ಕ್ಕೂ ಅಧಿಕ ಜೋಡಿಗಳು ನೋಂದಾಯಿಸಿಕೊಂಡಿದ್ದು, ವೈವಾಹಿಕ ಬದುಕಿಗೆ ಕಾಲಿಡಲು ಸಜ್ಜಾಗಿದ್ದರು.
ಆದರೆ ದೇಶದಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡ ಪರಿಣಾಮ ಲಾಕ್ ಡೌನ್ ಜಾರಿಯಾಗಿದ್ದರಿಂದ ಇದನ್ನು ಮುಂದೂಡಲಾಗಿತ್ತು. ಆ ಬಳಿಕವೂ ಸಪ್ತಪದಿ ವಿವಾಹ ಕಾರ್ಯಕ್ರಮ ಮುಂದೂಡಿಕೆಯಾಗುತ್ತಲೇ ಬಂದಿದ್ದು, ಇದೀಗ ಡಿಸೆಂಬರ್ ತಿಂಗಳಿನಲ್ಲಿ ದಿನಾಂಕ ನಿಗದಿಪಡಿಸಲಾಗಿದೆ.