
ಬೆಂಗಳೂರು: ಪಶುಸಂಗೋಪನೆ ಇಲಾಖೆಯ ಜವಾಬ್ದಾರಿ ನೀಡಿದ ದಿನದಿಂದ ಮನಸ್ಸಿನಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುವ ಮಹದಾಸೆ ಇತ್ತು. ಅದು ಈಗ ಕೈಗೂಡುವ ಸಮಯ ಹತ್ತಿರವಾಗಿದೆ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಸಹ ನಡೆಸಲಾಗಿದ್ದು, ಇದೇ ಡಿಸೆಂಬರ್ 7 ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮಂಡನೆ ಮಾಡಲಿದ್ದು, ಅದಕ್ಕೆ ಬೇಕಾದ ಎಲ್ಲ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿರುವ ಬೇರೆ ಬೇರೆ ರಾಜ್ಯಗಳಲ್ಲಿ ಅನುಷ್ಠಾನಗೊಂಡ ಕಾಯ್ದೆಯ ಅಧ್ಯಯನ ನಡೆಸಲಾಗಿದ್ದು, ಈ ಬಗ್ಗೆ ಇಲಾಖಾ ಅಧಿಕಾರಿಗಳ ಮಟ್ಟದಲ್ಲಿ ಹಾಗೂ ಪರಿಣಿತರೊಂದಿಗೆ ಚರ್ಚೆ ಮಾಡಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಗೋಹತ್ಯೆ ನಿಷೇಧ ಕಾಯ್ದೆ ಹೆಚ್ಚು ಬಲವಾಗಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಇನ್ನು ಮುಂದೆ ಗೋಹತ್ಯೆ ನಿಷೇಧವಾಗಲಿದ್ದು, ರಾಜ್ಯದ ಒಳಗೂ ಮತ್ತು ಹೊರಗೂ ಗೋಮಾಂಸ ಆಮದು ಮತ್ತು ರಫ್ತು ಸಂಪೂರ್ಣ ನಿಷೇಧ ಆಗಲಿದೆ.
ಕರ್ನಾಟಕ ಗೋ ಹತ್ಯೆ ಪ್ರತಿ ಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964 ಹಾಗೂ ನಿಯಮ 1967 ರಲ್ಲಿ ಗೋವುಗಳು ಅಥವಾ ಎಮ್ಮೆ ಕರುಗಳು ವಧೆ/ಹತ್ಯೆಗೆ ನಿಷೇಧವಿದೆ. ಇತರೆ ಜಾನುವಾರು ಹೋರಿ, ಎತ್ತು, ಎಮ್ಮೆ, 12 ವರ್ಷಕ್ಕಿಂತ ಹೆಚ್ಚು ವಯಸ್ಸಾದಲ್ಲಿ, ಸಂವರ್ಧನೆಗೆ, ಭಾರ ಎಳೆಯಲು, ತೀವ್ರ ಕಾಯಿಲೆ, ಹಾಲು ಉತ್ಪಾದನೆಗೆ, ಅಥವಾ ಇನ್ನಾವುದೇ ಕಾರಣದಿಂದ ಅಸಮರ್ಥವಾಗಿದ್ದರೆ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆದುಕೊಳ್ಳದ ಹೊರತು ವಧೆ ನಿಷೇಧವಿದೆ.
ಕಾಯ್ದೆ ಜಾರಿಗೆ ಬಂದರೆ ಜಾನುವಾರುಗಳ ವಧೆಗೆ ನಿಷೇಧ, ಗೋಮಾಂಸ ಮಾರಾಟ ಹಾಗೂ ಬಳಕೆಗೆ ನಿಷೇಧ, ವಧೆಗಾಗಿ ರಾಜ್ಯದಲ್ಲಿ ಹಾಗೂ ಹೊರ ರಾಜ್ಯಗಳಿಗೆ ಜಾನುವಾರಗಳ ಅಕ್ರಮ ಸಾಗಾಣಿಕೆ, ವಧೆಗಾಗಿ ಜಾನುವಾರಗಳ ಖರೀದಿ, ಮಾರಾಟ ಅಥವಾ ವಿಲೇವಾರಿಗೆ ಕಡಿವಾಣ ಬೀಳಲಿದೆ.
ಈಗಾಗಲೇ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಅಸ್ಥಿತ್ವಕ್ಕೆ ಬಂದಿದ್ದು, ಅದರ ಅಡಿಯಲ್ಲಿ ಯಾವುದೇ ರೀತಿಯ ಪ್ರಾಣಿ ಹಿಂಸೆಯನ್ನು ತಡೆಯಬಹುದಾಗಿದ್ದು. ಗೋ ಹತ್ಯೆ, ಗೋವುಗಳ ಅಕ್ರಮ ಸಾಗಾಟ, ಹಿಂಸೆ ತಡೆಯುವ ಬಗ್ಗೆ ಮಂಡಳಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.
ರಾಜಸ್ಥಾನ್, ಆಂಧ್ರಪ್ರದೇಶ ತೆಲಂಗಾಣ, ಅಸ್ಸಾಂ, ಬಿಹಾರ, ಚಂಡೀಗಡ, ಛತ್ತೀಸಗಡ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ್, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ತಮಿಳನಾಡು, ಉತ್ತರ ಪ್ರದೇಶರಾಜ್ಯಗಳಲ್ಲಿ ಗೋಹತ್ಯೆ ನಿಷೆಧ ಕಾಯ್ದೆ ಜಾರಿಯಲ್ಲಿದೆ. ಕರ್ನಾಟಕದಲ್ಲಿಯೂ ಸಮರ್ಪಕವಾಗಿ ಕಾರ್ಯಗತಗೊಳಿಸಲು ಸಿದ್ದವಾಗಿದೆ ಎಂದು ಹೇಳಲಾಗಿದೆ.