
ಚೀಲಗಳ ಒಳಗೆ ತುರುಕಿ ಸಾಯಲಿ ಎಂದು ಬಿಟ್ಟಿದ್ದ ಪುಟಾಣಿ ಮಗುವೊಂದು ಉತ್ತರ ಪ್ರದೇಶದ ಮೀರತ್ನ ರಸ್ತೆಯೊಂದರಲ್ಲಿ ಸಿಕ್ಕಿದೆ. ಚಳಿಯಲ್ಲಿ ಮಗು ಸಾಯಲಿ ಎಂದು ಖುದ್ದು ಹೆತ್ತವರೇ ಅದನ್ನು ಮೂರು ಚೀಲಗಳ ಒಳಗೆ ತುರುಕಿ ಬಿಟ್ಟುಬಿಟ್ಟಿದ್ದರು.
ಹೆಣ್ಣು ಮಗುವಿನ ಅಳುವನ್ನು ಕೇಳಿಸಿಕೊಂಡ ದಾರಿಹೋಕರು, ಚೀಲಗಳನ್ನು ಬಿಚ್ಚಿ ನೋಡಿದಾಗ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಒಂದೊಂದೇ ಚೀಲವನ್ನು ಬಿಚ್ಚಿ ನೋಡಿದಾಗ ಈ ಮಗು ಸಿಕ್ಕಿದೆ. ಪೊಲೀಸರ ಸಹಾಯದಿಂದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೀಗ ಸುರಕ್ಷಿತವಾಗಿದೆ.
ಚಳಿಯಲ್ಲಿ ಸಾಕಷ್ಟು ಸಮಯ ಹೊರಗೆ ಇದ್ದ ಕಾರಣ ಮಗುವಿಗೆ ಗಂಭೀರವಾದ ಆರೋಗ್ಯ ಸಮಸ್ಯೆಯಾಗಿತ್ತು. ಈಗ ಮಗು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಾಯಿಯ ಎದೆ ಹಾಲು ಸಿಗದೇ ಇರುವ ಕಾರಣ ಮಗುವಿಗೆ ಇನ್ನಷ್ಟು ಸಮಸ್ಯೆಯಾಗಿದೆ ಎನ್ನಲಾಗಿದೆ.
ಹೆಣ್ಣು ಮಗುವಾದ ಕಾರಣ ಅದು ತಮಗೆ ಹೊರೆಯಾಗಬಹುದು ಎಂದು ಹೆತ್ತವರೇ ಖುದ್ದು ಅದನ್ನು ಹೊರಗೆ ಎಸೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.