ಗಾಂಧಿನಗರ: ಕೋವಿಡ್ ಭೀತಿ ಜನರಲ್ಲಿ ನಿಧಾನವಾಗಿ ದೂರಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನ ಸುರಕ್ಷತಾ ನಿಯಮ ಪಾಲಿಸದೇ ಓಡಾಡುತ್ತಿದ್ದಾರೆ. ಆದರೆ, ಇದು ಕೋವಿಡ್ ವಾರಿಯರ್ಸ್ ಎಂದು ಕರೆಯುವ ಪೊಲೀಸರು ಆರೋಗ್ಯ ಕಾರ್ಯಕರ್ತರಿಗೆ ಕಂಟಕ ಉಂಟು ಮಾಡುತ್ತಿದೆ. ಅವರು ಹಾಗೂ ಅವರ ಕುಟುಂಬದವರಿಗೆ ಸೋಂಕು ಹರಡುವ ಪ್ರಮಾಣ ಹೆಚ್ಚುತ್ತಿದೆ.
ಗುಜರಾತ್ ಪೊಲೀಸ್ ಕಾನ್ಸ್ಟೇಬಲ್ ಒಬ್ಬರ ಕುಟುಂಬದ ಮೂವರು ಐದು ದಿನದಲ್ಲಿ ಕೋವಿಡ್ನಿಂದ ಮೃತಪಟ್ಟ ಆತಂಕಕಾರಿ ಸುದ್ದಿ ಹೊರ ಬಿದ್ದಿದೆ. ಅಹಮದಾಬಾದ್ನಲ್ಲಿ ಕರ್ತವ್ಯದಲ್ಲಿರುವ ಧಾವಲ್ ರಾವಲ್ ಎಂಬುವವರು ಈ ದುರ್ದೈವಿ. ಈ ಘಟನೆಯಿಂದ ಅವರು ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಕುಸಿದು ಹೋಗಿದ್ದಾರೆ.
ನವೆಂಬರ್ 14 ರಂದು ಅವರ ತಾಯಿ ಕೋವಿಡ್ನಿಂದ ಮೃತಪಟ್ಟರು. ಎರಡೇ ದಿನದಲ್ಲಿ ಅವರ ತಂದೆಗೆ ಕೂಡ ಕೋವಿಡ್ ಇರುವುದು ಗೊತ್ತಾಗಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಸಾವನ್ನಪ್ಪಿದ್ದರು. ಅದಾಗಿ ಮೂರೇ ದಿನಕ್ಕೆ ಅವರ ಸಹೋದರ ಕೂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಕೊನೆಯುಸಿರೆಳೆದರು. ರಾವಲ್, ಅವರ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದು ಮಾತ್ರವಲ್ಲ. ಅವರ ಚಿಕಿತ್ಸೆಗಾಗಿ ಖರ್ಚಾದ ಬಿಲ್ ಪಾವತಿಸಲು ತೊಂದರೆ ಅನುಭವಿಸುತ್ತಿದ್ದಾರೆ.