ಪ್ರೀತಿಸಿ ಮದುವೆಯಾದ ವರ್ಷದಲ್ಲೇ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದು ಹಾಕಿದ್ದಾನೆ ಪಾಪಿ ಪತಿ. ಈ ಘಟನೆ ನಡೆದಿರೋದು ಮಂಡ್ಯದಲ್ಲಿ. ಪಾಂಡವಪುರ ತಾಲೂಕಿನ ತಿರುಮಲಾಪುರ ಗ್ರಾಮದ ಟಿ.ಕೆ.ಸ್ವಾಮಿ ಎಂಬಾತ ಪ್ರೀತಿಸಿ ಮದುವೆಯಾಗಿದ್ದ ತನ್ನ ಪತ್ನಿ ಮೇಘಶ್ರೀಯನ್ನು ಕೊಲೆ ಮಾಡಿ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ.
ಇನ್ನು ಈ ಘಟನೆ ನಡೆದು 5 ವರ್ಷವೇ ಆಗಿದೆ. 2014ರಲ್ಲಿ ಮೃತ ಮೇಘಶ್ರೀ ಹಾಗೂ ಸ್ವಾಮಿ ಪ್ರೀತಿಸಿ ಮದುವೆಯಾಗಿದ್ದರು. ಮನೆ ಬಿಟ್ಟು ಬೆಂಗಳೂರಿನ ದೇವಸ್ಥಾನ ಒಂದರಲ್ಲಿ ಮದುವೆಯಾಗಿದ್ದ ಈ ಜೋಡಿ ಬೆಂಗಳೂರು, ಮೈಸೂರು ಸೇರಿದಂತೆ ನಾನಾ ಕಡೆ ಮನೆ ಬಾಡಿಗೆ ಪಡೆದು ವಾಸವಾಗಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಪರಸ್ಪರ ಜಗಳವಾಗಿದೆ. ಕೊನೆಗೆ ಒಂದು ದಿನ ಪತ್ನಿಯನ್ನು ಬಿಟ್ಟು ತನ್ನ ಹುಟ್ಟೂರಿಗೆ ವಾಪಸ್ಸಾಗಿದ್ದಾನೆ ಸ್ವಾಮಿ. ಪತಿಯನ್ನು ಹುಡುಕಿಕೊಂಡು ಗಂಡನ ಮನೆಗೆ ಬಂದ ಮೇಘಶ್ರೀ, ತನ್ನನ್ನು ರಿಜಿಸ್ಟಾರ್ ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಸಿಟ್ಟಿಗೆದ್ದ ಆತ ಆಕೆಯ ಕತ್ತು ಹಿಸುಕಿ ಸಾಯಿಸಿ, ನಾಲೆಯಲ್ಲಿ ಎಸೆದಿದ್ದಾನೆ.
ಮೇಘಶ್ರೀ ಮನೆ ಬಿಟ್ಟು ಬಂದಾಗಿನಿಂದಲೂ ತವರು ಮನೆಯವರೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಒಂದು ದಿನ ಮೇಘಶ್ರೀ ತಾಯಿ ಬೀರು ಸ್ವಚ್ಛಗೊಳಿಸುವಾಗ ಸ್ವಾಮಿಯ ವೋಟರ್ ಕಾರ್ಡ್ ಸಿಕ್ಕಿದೆ. ತಕ್ಷಣ ಮತದಾರ ಚೀಟಿಯಲ್ಲಿದ್ದ ವಿಳಾಸವನ್ನು ಮೇಘಶ್ರೀ ಕುಟುಂಬ ಹುಡುಕಿಕೊಂಡು ಬಂದಿದೆ. ಆದರೆ ಅಷ್ಟೊತ್ತಿಗೆ ಮೇಘಶ್ರೀ ಇರಲಿಲ್ಲ. ಅವಳು 5ವರ್ಷದ ಹಿಂದೆಯೇ ತೀರಿ ಹೋಗಿದ್ದಾಳೆ ಎಂಬ ಸಂಗತಿಯನ್ನು ಆ ಹಳ್ಳಿಯವರು ಮೇಘಶ್ರೀ ತಾಯಿಗೆ ಹೇಳಿದ್ದಾರೆ. ಇನ್ನು ತನ್ನ ಮಗಳ ಸಾವು ಕೊಲೆ ಎಂದು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಮೇಘಶ್ರೀ ತಾಯಿ ಮಹದೇವಮ್ಮ ದೂರು ದಾಖಲಿಸಿದ್ದಾರೆ. ದೂರಿನನ್ವಯ ಸ್ವಾಮಿಯನ್ನು ಪೊಲೀಸರು ವಿಚಾರಣೆ ಮಾಡಿದಾಗ ಸತ್ಯಾಸತ್ಯತೆ ಬಯಲಾಗಿದೆ.