ಪುದುಚೇರಿ: ಹುಡುಗಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಪುದುಚೇರಿಯಲ್ಲಿ ನಡೆದಿದೆ. ಆದರೆ, ಕಾಮುಕನ ವಿರುದ್ಧ ಧೈರ್ಯದಿಂದ ಹೋರಾಡಿದ ಬಾಲಕಿ ತನ್ನನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ಬುಧವಾರ ರಾತ್ರಿ 14 ವರ್ಷದ ಬಾಲಕಿಯನ್ನು ಅಪಹರಿಸಿದ 36 ವರ್ಷದ ವ್ಯಕ್ತಿ ಇಂತಹ ಕೃತ್ಯವೆಸಗಿದ್ದಾನೆ. ಪೋಷಕರು ದೂರು ದಾಖಲಿಸದಿರಲು ನಿರ್ಧರಿಸಿದ್ದಾರೆ. ಆದರೆ, ಅನಾಮಧೇಯ ವ್ಯಕ್ತಿಯೊಬ್ಬ ಈ ಅಪರಾಧದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ ನಂತರ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಕೂನಿಚಾಂಪೇಟ್ ನ ಪಿ. ಕಾರ್ತಿಕ್ ಮನೆ ಹಿತ್ತಲಿನಿಂದ ಹುಡುಗಿಯನ್ನು ಅಪಹರಿಸಿ ತೋಪಿಗೆ ಎಳೆದುಕೊಂಡು ಹೋಗಿದ್ದಾನೆ. ದುಪ್ಪಟ್ಟದಿಂದ ಮರಕ್ಕೆ ಆಕೆಯನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಧೈರ್ಯದಿಂದ ಆತನ ವಿರುದ್ಧ ಹುಡುಗಿ ಹೋರಾಡಿ ಆತನ ಪ್ರಯತ್ನ ವಿಫಲಗೊಳಿಸಿದ್ದಾಳೆ.
ಅತ್ಯಾಚಾರಕ್ಕೆ ಯತ್ನಿಸಿದ ಆತನ ಪ್ರಯತ್ನ ವಿಫಲವಾಗಿದ್ದು, ತೋಪಿನ ಕಡೆಗೆ ಯಾರೋ ಬರುವುದನ್ನು ಗಮನಿಸಿದ ಆರೋಪಿ ಸ್ಥಳದಿಂದ ಓಡಿ ಹೋಗಿದ್ದಾನೆ. ರಾತ್ರಿಯಿಡೀ ಅಲ್ಲೇ ಕಾಲಕಳೆದ ಬಾಲಕಿ ಬೆಳಗ್ಗೆ ದಾರಿಹೋಕರಿಂದ ರಕ್ಷಿಸಲ್ಪಟ್ಟಿದ್ದಾಳೆ. ಮನೆಗೆ ಬಂದ ಆಕೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಕುಟುಂಬದವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಅನಾಮಧೇಯ ವ್ಯಕ್ತಿಯೊಬ್ಬ ಉನ್ನತ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ ನಂತರ ಪೊಲೀಸ್ ಅಧಿಕಾರಿಗಳು ತಿರುಕ್ಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹುಡುಗಿಯ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ.