ಬೆಂಗಳೂರು: ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತಾಗಿ ನಾಳೆ ಮಹತ್ವದ ಸಭೆ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಶಾಲೆ ಆರಂಭದ ಕುರಿತು ಚರ್ಚಿಸಲು ಸಭೆ ನಿಗದಿಯಾಗಿದೆ.
ವಿಧಾನಸೌಧದಲ್ಲಿ ಸೋಮವಾರ ಮಧ್ಯಾಹ್ನ 12.30 ಕ್ಕೆ ಸಭೆ ನಡೆಯಲಿದೆ. ಶಿಕ್ಷಣ ಸಚಿವರು, ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಲಿದ್ದು, ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಲಾಗಿದೆ.
ಡಿಸೆಂಬರ್ 2 ನೇ ವಾರದಿಂದ ಎಸ್ಎಸ್ಎಲ್ಸಿ, ಸೆಕೆಂಡ್ ಪಿಯುಸಿ ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಆಯುಕ್ತರು ಶಿಫಾರಸು ಮಾಡಿದ್ದಾರೆ. ಪೋಷಕರು, ಎಸ್.ಡಿ.ಎಂ.ಸಿ., ತಜ್ಞರು, ಅಧಿಕಾರಿಗಳು, ಶಿಕ್ಷಕರು, ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ವರದಿ ಸಿದ್ಧಪಡಿಸಲಾಗಿದೆ. ವರದಿಯನ್ನು ಸಭೆಯಲ್ಲಿ ಮಂಡಿಸಲಾಗುವುದು.
ಕೊರೋನಾ ಕಡಿಮೆಯಾಗುತ್ತಿದ್ದು, ಇದೇ ವೇಳೆ 2 ನೇ ಅಲೆ ಆತಂಕವೂ ಇದೆ. ಇಂತಹ ಸಂದರ್ಭದಲ್ಲಿ ಸುರಕ್ಷತೆ ಕ್ರಮ, ಮಾರ್ಗಸೂಚಿಯೊಂದಿಗೆ ಕಾಲೇಜ್ ಗಳನ್ನು ಆರಂಭಿಸಲಾಗಿದ್ದು, ಅದೇ ರೀತಿ ಮಾರ್ಗಸೂಚಿಗಳೊಂದಿಗೆ ಶಾಲೆಗಳನ್ನು ಆರಂಭಿಸಬೇಕೆ? ಬೇಡವೇ ಎಂಬುದರ ಕುರಿತಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.