ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೂರು ವರ್ಷಗಳ ಬಳಿಕ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದು, ಹೊಸ ಲುಕ್ ನಲ್ಲಿ ಮಿಂಚಿದ್ದಾರೆ. ಅಂದಹಾಗೇ ಧ್ರುವ ಸರ್ಜಾ ತಮ್ಮ ಉದ್ದದ ಕೂದಲನ್ನು ಕತ್ತರಿಸಿರುವುದರ ಹಿಂದೆ ಒಂದು ಒಳ್ಳೆಯ ಉದ್ದೇಶ ಕೂಡ ಇದೆ.
’ಪೊಗರು’ ಚಿತ್ರಕ್ಕಾಗಿ ಕಳೆದ ಮೂರು ವರ್ಷಗಳಿಂದ ಕೂದಲು ಬೆಳೆಸಿದ್ದ ಧ್ರುವ ಸರ್ಜಾ ಇದೀಗ ಶೂಟಿಂಗ್ ಪೂರ್ಣಗೊಂಡ ಬೆನ್ನಲ್ಲೇ ತಮ್ಮ ಕೂದಲು ಕಟ್ ಮಾಡುವ ನಿರ್ಧಾರ ಮಾಡಿದ್ದಾರೆ. ಆದರೆ ತಮ್ಮ ಉದ್ದದ ಕೂದಲನ್ನು ಹಾಗೇ ಸುಮ್ಮನೆ ಕತ್ತರಿಸದೇ ಅದನ್ನು ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಧ್ರುವ ಸರ್ಜಾ, ಪೊಗರು ಚಿತ್ರದ ಚಿತ್ರೀಕರಣ ಮುಗಿದಿದೆ. ಹಾಗಾಗಿ ಹೇರ್ ಕಟ್ ಮಾಡಬೇಕೆಂದು ಹೋಗಿದ್ದೆ. ಈ ವೇಳೆ ನನ್ನ ಸ್ನೇಹಿತರೆಲ್ಲರೂ 10 ಇಂಚು ಉದ್ದದ ಕೂದಲನ್ನು 15 ವರ್ಷದ ಒಳಗಿನ ಮಕ್ಕಳಿಗೆ ಕ್ಯಾನ್ಸರ್ ಬಂದು ಕಿಮೋಥೆರಪಿ ಚಿಕಿತ್ಸೆ ಪಡೆಯುವವರಿಗೆ ಸಹಾಯವಾಗುತ್ತೆ. ಅಂತಹ ಮಕ್ಕಳಿಗೆ ವಿಗ್ ತಯಾರು ಮಾಡಲು ಈ ಕೂದಲು ಅನುಕೂಲವಾಗುತ್ತೆ ಎಂದು ಸಲಹೆ ನೀಡಿದ್ದಾರೆ. ಹಾಗಾಗಿ ಕೂದಲನ್ನು ಕ್ಯಾನ್ಸರ್ ಪೀಡಿತ ಮಕ್ಕಳ ವಿಗ್ ಬಳಕೆಗೆ ದಾನ ಮಾಡಿದ್ದಾಗಿ ತಿಳಿಸಿದ್ದಾರೆ. ಧ್ರುವ ಸರ್ಜಾ ಅವರ ಉದಾತ್ತ ಮನೋಭಾವಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.