1300 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು ಎಂದು ನಂಬಲಾದ ಹಿಂದೂ ದೇವಾಲಯವನ್ನ ಪಾಕಿಸ್ತಾನ ಹಾಗೂ ಇಟಾಲಿಯನ್ ಪುರಾತತ್ವ ತಜ್ಞರು ಪಾಕಿಸ್ತಾನ ವಾಯುವ್ಯ ಭಾಗದ ಸ್ವಾತ್ ಜಿಲ್ಲೆಯ ಪರ್ವತವೊಂದರಲ್ಲಿ ಪತ್ತೆ ಮಾಡಿದ್ದಾರೆ.
ಗುರುವಾರ ಈ ವಿಚಾರವಾಗಿ ಮಾತನಾಡಿದ ಪುರಾತತ್ವ ಇಲಾಖೆಯ ಅಧಿಕಾರಿ ಫಝಲ್ ಖಲಿಕ್, ಸ್ವಾತ್ ಜಿಲ್ಲೆಯಲ್ಲಿ ಪತ್ತೆಯಾದ ದೇವಾಲಯ ವಿಷ್ಣುವಿನದ್ದಾಗಿದೆ. ಹಿಂದೂ ಶಾಹಿ ಅವಧಿಯಲ್ಲಿ ಅಂದರೆ ಸರಿಸುಮಾರು 1300 ವರ್ಷಗಳ ಹಿಂದೆ ಹಿಂದೂಗಳು ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದ್ದಾರೆ.
ದೇವಾಲಯದ ಬಳಿಯಲ್ಲೇ ಇರುವ ಈಜುಕೊಳವನ್ನೂ ತಜ್ಞರು ಕಂಡುಹಿಡಿದಿದ್ದಾರೆ. ದೇವಸ್ಥಾನಕ್ಕೆ ತೆರಳುವ ಮುನ್ನ ಹಿಂದೂಗಳು ಇಲ್ಲಿ ಸ್ನಾನ ಮಾಡುತ್ತಿದ್ದರು ಎಂದು ಊಹಿಸಲಾಗಿದೆ. ಸ್ವಾತ್ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಕುರುಹುಗಳು ಕಂಡು ಬಂದಿದೆ.