ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆತ ಕೊರೊನಾದಿಂದಾಗಿ ಕೆಲಸ ಕಳೆದುಕೊಂಡಿದ್ದ. ಕೆಲಸ ಹೋಗುವುದಕ್ಕೂ ಮುನ್ನ ಮದುವೆ ನಿಶ್ಚಯವಾಗಿತ್ತು. ತಾನು ಮದುವೆ ಮಾಡಿಕೊಳ್ಳುವ ಯುವತಿಗೆ ಚಿನ್ನದ ಸರ ಕೊಡಿಸುವ ಅನಿವಾರ್ಯತೆ ಆತನಿಗಿತ್ತು. ಆದರೆ ಆತನ ಕೈಯಲ್ಲಿ ಹಣವಿರಲಿಲ್ಲ. ಹೀಗಾಗಿ ತಾನು ಮದುವೆಯಾಗುವ ಯುವತಿಯೊಂದಿಗೆ ಸೇರಿ ಪ್ಲಾನ್ ಮಾಡಿ ಚಿನ್ನದ ಸರ ಕದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಈ ಘಟನೆ ನಡೆದಿರೋದು ಬೆಂಗಳೂರಿನ ಜೆ.ಪಿ.ನಗರದಲ್ಲಿ. ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ರಾಘವೇಂದ್ರ ರಾವ್ ತನ್ನ ಭಾವಿ ಪತ್ನಿಯೊಂದಿಗೆ ನವರತನ್ ಜ್ಯುವೆಲರ್ಸ್ಗೆ ತೆರಳಿದ್ದಾನೆ. ಅಲ್ಲಿ ಎರಡು ಚಿನ್ನದ ಸರಗಳನ್ನು ನೋಡಿದ ಈ ಜೋಡಿ ಫೈನಲ್ ಮಾಡಿದೆ.
ನಂತರ ಎಟಿಎಂ ಕಾರ್ಡ್ ಬಿಟ್ಟುಬಂದಿದ್ದು, ಬೈಕ್ನಲ್ಲಿ ಇದೆ ತರುತ್ತೇನೆಂದು ಸುಳ್ಳು ಹೇಳಿ ಹೋದ ರಾಘವೇಂದ್ರ ಅಂಗಡಿ ಮುಂದೆ ತನ್ನ ಬೈಕ್ ತಂದು ನಿಲ್ಲಿಸಿದ್ದಾನೆ. ಇತ್ತ ಈ ಯುವತಿ ಎರಡು ಚಿನ್ನದ ಸರಗಳನ್ನು ಕತ್ತಿನಲ್ಲಿ ಹಾಕಿಕೊಂಡೇ ಎಟಿಎಂ ನಿಂದು ಹಣ ತರೋದಾಗಿ ಹೊರಗೆ ಹೋಗಿದ್ದಾಳೆ. ಹೇಗಿದ್ದರೂ ಚಿನ್ನ ಕೊಳ್ಳುತ್ತಾರೆಂಬ ನಂಬಿಕೆಯಲ್ಲಿ ಆ ಅಂಗಡಿ ಸಿಬ್ಬಂದಿ ಕೂಡ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ.
ಇತ್ತ ಅಂಗಡಿಯಿಂದ ಹೊರ ಹೋಗುತ್ತಿದ್ದಂತೆ ಈ ನವ ಜೋಡಿ ಎಸ್ಕೇಪ್ ಆಗಿದ್ದಾರೆ. ತಕ್ಷಣವೇ ಜೆ.ಪಿ.ನಗರ ಪೊಲೀಸರಿಗೆ ಅಂಗಡಿ ಸಿಬ್ಬಂದಿ ದೂರು ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿ ಟಿವಿ ವಿಡಿಯೋ ಆಧರಿಸಿ ರಾಘವೇಂದ್ರ ರಾವ್ನನ್ನು ಬಂಧಿಸಿದ್ದಾರೆ. ಇನ್ನು ಈತನನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ಇದೇ ರೀತಿಯಲ್ಲಿ ಮತ್ತೊಂದು ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತನಿಂದ 120ಗ್ರಾಂನ ಎರಡು ಸರ ವಶಪಡಿಸಿಕೊಂಡಿದ್ದಾರೆ.