ಚೆನ್ನೈ: ತಮಿಳುನಾಡು ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಡಿಎಂಕೆ ಯುವ ಘಟಕದ ಕಾರ್ಯದರ್ಶಿಯಾಗಿರುವ ಉದಯನಿಧಿ ಸ್ಟಾಲಿನ್ ಪಕ್ಷದ ಸಂಸ್ಥಾಪಕ ಎಂ. ಕರುಣಾನಿಧಿ ಪೂರ್ವಜರ ಮನೆಯಿಂದ ರಾಜ್ಯವ್ಯಾಪಿ ‘ವಿದ್ಯಾಲೈ ನೋಕ್ಕಿ ಸ್ಟಾಲಿನಿನ್ ಕುರಲ್’ ಅಭಿಯಾನ ಆರಂಭಿಸಿದ್ದಾರೆ.
ಕೊರೋನಾ ಕಾರಣದಿಂದ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೀಗಿದ್ದರೂ ಕೂಡ, ನಿಯಮ ಉಲ್ಲಂಘಿಸಿ ತಿರುಕಾವಾಲೈನಲ್ಲಿ ಉದಯನಿಧಿ ಸ್ಟಾಲಿನ್ ಮತ್ತು ಪಕ್ಷದ ಕಾರ್ಯಕರ್ತರು ಅಭಿಯಾನ ಕೈಗೊಂಡ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಒಂದೆರಡು ಗಂಟೆಗಳ ನಂತರ ಬಿಡುಗಡೆ ಮಾಡಲಾಗಿದೆ.
ಕೀಲ್ವೆಲ್ಲೂರು ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿದ್ದ ಅಭಿಯಾನವನ್ನು ಕೈಬಿಡಲಾಗಿದ್ದು, ಪೊಲೀಸ್ ಇಲಾಖೆ ಮೂಲಕ ಅಭಿಯಾನಕ್ಕೆ ಅಡ್ಡಿ ಉಂಟು ಮಾಡಲಾಗುತ್ತಿದೆ. ಎಐಎಡಿಎಂಕೆ ಭ್ರಷ್ಟಾಚಾರ ಮತ್ತು ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ಬಹಿರಂಗಪಡಿಸುವ ಮೂಲಕ ನಾವು ಅಭಿಯಾನವನ್ನು ಮುಂದುವರಿಸಲಿದ್ದೇನೆ ಎಂದು ಉದಯನಿಧಿ ಸ್ಟಾಲಿನ್ ತಿಳಿಸಿದ್ದಾರೆ.