ಕೊರೊನಾ ಅಂದರೆ ಸಾಕು ಜನರು ಮೂಗು ಮುರಿಯೋ ಈ ಟೈಂನಲ್ಲಿ ಕೇರಳದಲ್ಲಿ ಮಾತ್ರ ಬಿಜೆಪಿ ಕಾರ್ಯಕರ್ತರು ಕೊರೊನಾಗೆ ಜೈ ಅಂತಾ ಹೇಳ್ತಿದ್ದಾರೆ.
ಅಂದಹಾಗೆ ಬಿಜೆಪಿ ಕಾರ್ಯಕರ್ತರು ಈ ರೀತಿ ಕೊರೊನಾಗೆ ಜೈಕಾರ ಹಾಕೋಕೆ ಕಾರಣಾನೂ ಇದೆ. ಕೇರಳದ ಕೊಲ್ಲಮ್ ಕಾರ್ಪೋರೇಷನ್ನ ಮೈಥಿಲಿ ವಾರ್ಡ್ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಹೆಸರು ಕೊರೊನಾ ಥಾಮಸ್.
24 ವರ್ಷದ ಕೊರೊನಾ ಥಾಮಸ್ಗೆ ಅವರ ಹೆಸರು ಈ ವರ್ಷ ತುಂಬಾನೇ ಪ್ರಸಿದ್ಧಿ ತಂದುಕೊಟ್ಟಿದೆಯಂತೆ. ಇಷ್ಟು ವರ್ಷ ನನ್ನ ಹೆಸರಿನ ಬಗ್ಗೆ ನನಗೆ ಏನೂ ಅನ್ನಿಸ್ತಾ ಇರಲಿಲ್ಲ. ಆದರೆ ಇದೀಗ ಎಲ್ಲೆಡೆ ಕೊರೊನಾ ವೈರಸ್ನದ್ದೇ ಚರ್ಚೆ ಬಳಿಕ ನನ್ನ ಹೆಸರೇ ನನಗೆ ವಿಚಿತ್ರ ಎನಿಸೋಕೆ ಶುರುವಾಗಿದೆ ಅಂತಾರೆ ಕೊರೊನಾ ಥಾಮಸ್.
ಕೊರೊನಾರ ತಂದೆ ಮೂಲತಃ ಕಲಾವಿದರಂತೆ. ತಮ್ಮ ಅವಳಿ ಮಕ್ಕಳಿಗೆ ವಿಶೇಷವಾದ ಹೆಸರನ್ನಿಡಬೇಕು ಎಂದು ನಿರ್ಧರಿಸಿದ ಅವರು, ಹೆಣ್ಣು ಮಗುವಿಗೆ ಕೊರೊನಾ ಹಾಗೂ ಗಂಡು ಮಗುವಿಗೆ ಕೋರಲ್ ಎಂದು ನಾಮಕರಣ ಮಾಡಿದ್ದರಂತೆ.
ಅಂದಹಾಗೆ ಕೊರೊನಾ ಗರ್ಭಿಣಿಯಾಗಿದ್ದಾಗ ಕೊರೊನಾ ಸೋಂಕು ದೃಢವಾಗಿದ್ದರಿಂದಲೂ ಕೆಲ ದಿನಗಳ ಹಿಂದಷ್ಟೇ ಸುದ್ದಿಯಾಗಿದ್ದರು. ಆದರೆ ಕೊರೊನಾ ವಿರುದ್ಧ ಜಯಿಸಿರುವ ಕೊರೊನಾ ಥಾಮಸ್ ಮಗು ಕೂಡ ಆರೋಗ್ಯವಾಗಿದೆ. ಕೊರೊನಾ ಪತಿ ಕೂಡ ಬಿಜೆಪಿ ಸದಸ್ಯರಾಗಿದ್ದು ಕೊರೊನಾ ರಾಜಕೀಯ ಹಾದಿ ತುಳಿಯಲು ಅವರೇ ಸ್ಪೂರ್ತಿಯಾಗಿದ್ದಾರೆ.