ದೆಹಲಿಯ ಸಮ್ಯಾಪುರ ಬಡ್ಲಿ ಪೊಲೀಸ್ ಠಾಣೆಯ ಮಹಿಳಾ ಮುಖ್ಯ ಪೇದೆ ಸೀಮಾ ಢಾಕಾ ಕೇವಲ ಮೂರು ತಿಂಗಳ ಅವಧಿಯಲ್ಲಿ ತಪ್ಪಿಸಿಕೊಂಡಿದ್ದ 76 ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಇವರಲ್ಲಿ 56 ಮಕ್ಕಳು 14ರ ವಯೋಮಾನದ ಒಳಗಿನವರಾಗಿದ್ದಾರೆ.
ಇದೀಗ ದೆಹಲಿ ಪೊಲೀಸರು ಸೀಮಾರ ಈ ಅದ್ಭುತ ಕೆಲಸವನ್ನು ಗುರುತಿಸಿ, ಅವರಿಗೆ ಸೇವೆಯಲ್ಲಿ ಬಡ್ತಿ ಹಾಗೂ ಪ್ರೋತ್ಸಾಹ ಧನ ಘೋಷಣೆ ಮಾಡಿದ್ದಾರೆ. ಈ ವಿಷಯವನ್ನು ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್ ಶ್ರೀವಾಸ್ತವ ಖುದ್ದು ಘೋಷಿಸಿದ್ದಾರೆ.
ತಂತಮ್ಮ ಮನೆಗಳಿಂದ ತಪ್ಪಿಸಿಕೊಂಡು ಹೋಗುವ ಮಕ್ಕಳನ್ನು ಯಶಸ್ವಿಯಾಗಿ ಪತ್ತೆ ಮಾಡಲು ನೆರವಾಗುವ ಸಿಬ್ಬಂದಿಗೆ ಈ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ದೆಹಲಿ ಪೊಲೀಸ್ ಆಯುಕ್ತ ಶ್ರೀವಾಸ್ತವ ಘೋಷಿಸಿದ್ದರು.
ವರ್ಷವೊಂದರ ಒಳಗೆ 14 ವರ್ಷ ವಯಸ್ಸಿನ ಒಳಗಿನ 50 ಮಕ್ಕಳನ್ನು ಯಶಸ್ವಿಯಾಗಿ ಪತ್ತೆ ಮಾಡಲು ನೆರವಾಗುವ ಪೊಲೀಸ್ ಪೇದೆಗಳಿಗೆ ಈ ವಿಶೇಷ ಪ್ರೋತ್ಸಾಹ ಧನವನ್ನು ಕೊಡಲಾಗುವುದು. ಇದಕ್ಕಾಗಿ ’ಅಸಾಧಾನ ಕಾರ್ಯ ಪುರಸ್ಕಾರ’ ಕೊಟ್ಟು ಸನ್ಮಾನಿಸಲಾಗುವುದು.