ಬ್ಯಾಂಕಾಕ್: ಆನೆಗಳು ಬಲಶಾಲಿಯಾಗಷ್ಟೇ ಅಲ್ಲ. ಮುದ್ದಾಗಿಯೂ ಇರುತ್ತವೆ. ಅದರಲ್ಲೂ ಮರಿಯಾನೆಗಳ ಆಟ, ಕೀಟಲೆ ನೋಡುವುದೆಂದರೆ ಇನ್ನೂ ಮೋಜು. ಉತ್ತರ ಥೈಲ್ಯಾಂಡ್ ನ ಚಿಂಗ್ ಮೈ ಎಂಬಲ್ಲಿ ಆನೆ ಮರಿಯೊಂದರ ಆಟ ಈಗ ನೆಟ್ಟಿಗರ ಗಮನ ಸೆಳೆದಿದೆ.
ರಾತ್ರಿ ಹೊತ್ತಲ್ಲಿ ಕಬ್ಬು ಕದ್ದು ತಿನ್ನುತ್ತಿದ್ದ ಪುಟ್ಟ ಆನೆ ಮರಿ, ಜನ ಬಂದು ಬೆಳಕು ಬಿಟ್ಟ ತಕ್ಷಣ ಪಕ್ಕಕ್ಕೆ ಓಡಿ ಅಡಗಿಕೊಳ್ಳುವ ಫೋಟೋವೊಂದು ಸಖತ್ ವೈರಲ್ ಆಗಿದೆ. ಅದು ಕರೆಂಟ್ ಕಂಬದ ಹಿಂದೆ ಬಚ್ಚಿಟ್ಟುಕೊಂಡಿದ್ದು, ತಾನು ಯಾರಿಗೂ ಕಾಣುವುದಿಲ್ಲ ಎಂದುಕೊಂಡಿದೆ. ಆದರೆ, ಅದರ ಗಾತ್ರದ ಕಾರಣಕ್ಕೆ ಮರಿ ಎಲ್ಲರಿಗೂ ಕಾಣುತ್ತದೆ.
ಆನೆಗಳು ಥೈಲ್ಯಾಂಡ್ ದೇಶದ ರಾಷ್ಟ್ರೀಯ ಪ್ರಾಣಿಗಳಾಗಿವೆ. ಅಲ್ಲಿನ ಸಂಸ್ಕೃತಿಗೆ ಗಜಗಳು ಮಹತ್ವದ ಕೊಡುಗೆ ನೀಡಿವೆ. ಆ ದೇಶದಲ್ಲಿ ಆನೆಗಳು ಸಂರಕ್ಷಿತ ಪ್ರಾಣಿಗಳಾಗಿವೆ. ಅವುಗಳನ್ನು ಹೊಡೆಯುವುದು ದಂಡನೀಯ. ದೇಶದಲ್ಲಿ 2 ಸಾವಿರದಷ್ಟು ಆನೆಗಳನ್ನು ಮಾತ್ರ ಗುರುತಿಸಲಾಗಿದೆ.