ಚೆನ್ನೈ: ತಮಿಳುನಾಡಿನ ಮಾಜಿ ಸಚಿವೆ, ಶಾಸಕಿ ಅರುಣಾ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಸಮಯಕ್ಕೆ ಸರಿಯಾಗಿ ಅವರನ್ನು ತಿರುನಲ್ವೇಲಿಯ ಶಿಪಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಅಲಂಗುಲಂ ಶಾಸಕರಾದ ಪೊಂಗೈಟ್ಟೈ ಅಲಾಡಿ ಅರುಣಾ ನಿದ್ದೆ ಮಾತ್ರೆಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಡಿಎಂಕೆ ಶಾಸಕಿ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಬೇಸರಗೊಂಡು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಬುಧವಾರ ಸಂಜೆ ಕಡಾಯಂನಲ್ಲಿ ನಡೆದ ಬೂತ್ ಸಮಿತಿಯ ಸಭೆಯಲ್ಲಿ ಪಕ್ಷದ ಕಾರ್ಯದರ್ಶಿ ಕುಮಾರ್ ಅವರ ಬೆಂಬಲಿಗರು ನಿಂದಿಸಿದ್ದಾರೆ. ಪಕ್ಷದ ಪದಾಧಿಕಾರಿಗಳನ್ನು ಶಾಸಕರು ಗೌರವಿಸುತ್ತಿಲ್ಲ ಎಂಬ ಕಾರಣಕ್ಕೆ ವಾಗ್ವಾದ ನಡೆದಿದ್ದು, ಮಾತನಾಡಲು ಅವಕಾಶ ನೀಡದೇ ಮೈಕ್ ಕಿತ್ತುಗೊಳ್ಳಲಾಗಿತ್ತು. ಸಭೆಯ ಮಧ್ಯದಲ್ಲೇ ಹೊರನಡೆದಿದ್ದ ಶಾಸಕರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.