ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಬಿಜೆಪಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಶಂಕರ ಪಾಟೀಲ ಮುನೇನಕೊಪ್ಪ, ಪ್ರೊ. ಲಿಂಗಣ್ಣ ಅವರು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿನ್ನೆಯಷ್ಟೇ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಸಮಾಲೋಚನೆ ನಡೆಸಿದ್ದಾರೆ.
ಸಂಪುಟಕ್ಕೆ ಮುನಿರತ್ನ, ಆರ್. ಶಂಕರ್, ಎಂಟಿಬಿ ನಾಗರಾಜ್ ಸೇರ್ಪಡೆ ಖಚಿತವಾಗಿದೆ. ಇನ್ನು ಸಂಪುಟ ಪುನಾರಚನೆಯಾದಲ್ಲಿ ಹಲವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಸಿಗಲಿದೆ. ಉಳಿದಂತೆ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ ಸೇರಿ ಹಲವರ ಹೆಸರು ಕೇಳಿಬಂದಿದೆ. ವರಿಷ್ಠರಿಂದ 3 ದಿನಗಳಲ್ಲಿ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. ಪೂರ್ಣಿಮಾ ಶ್ರೀನಿವಾಸ್, ತಿಪ್ಪಾರೆಡ್ಡಿ, ಎಸ್.ಎ. ರವೀಂದ್ರ ನಾಥ್, ಎಂ.ಪಿ. ಕುಮಾರಸ್ವಾಮಿ, ಬಸವನಗೌಡ ಪಾಟೀಲ್ ಯತ್ನಾಳ್, ಸುನಿಲ್ ಕುಮಾರ್ ಮೊದಲಾದವರು ಆಕಾಂಕ್ಷಿಗಳಾಗಿದ್ದು ಯಾರಿಗೆ ಅವಕಾಶ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.