ಜೈಪುರ್: ಪಶ್ಚಿಮ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮದುವೆಯಾಗಲು ನಿರಾಕರಿಸಿದ ಯುವ ವಿಧವೆಯೊಬ್ಬಳ ಮೂಗು ಮತ್ತು ನಾಲಿಗೆ ಕತ್ತರಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಜೋಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಕೆಯ ಸಹೋದರ ಸಂಕ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಾಗೀರೋಂಕಿ ಧಾನಿ ನಿವಾಸಿಯಾಗಿರುವ ಗುಡ್ಡಿ ದೇವಿ ಮದುವೆಯಾಗಿ ಒಂದು ವರ್ಷದ ನಂತರ, ಕಳೆದ ಆರು ವರ್ಷಗಳ ಹಿಂದೆ ಆಕೆಯ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಕುಟುಂಬದ ಮತ್ತೊಬ್ಬ ಸದಸ್ಯನನ್ನು ಮದುವೆಯಾಗುವಂತೆ ಆಕೆಯ ಮಾವಂದಿರ ಕಡೆಯವರು ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.
ಪೊಲೀಸರ ಹೇಳಿಕೆಯ ಪ್ರಕಾರ, ಗುಡ್ಡಿದೇವಿ ಮನೆಯ ಸಮೀಪ ವಾಸಿಸುತ್ತಿದ್ದ ಜಾನು ಖಾನ್ ಎಂಬಾತ ಸಹಾಯದ ನೆಪದಲ್ಲಿ ತನ್ನ ಸೋದರಳಿಯನನ್ನು ಮದುವೆಯಾಗುವಂತೆ ಬಲವಂತ ಮಾಡಿದ್ದಾನೆ. ಮಂಗಳವಾರ ಸಂಜೆ ಆಕೆಯ ಮನೆಗೆ ಬಂದಿದ್ದ ಜಾನು ಖಾನ್ ಸೋದರಳಿಯನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದು, ಇದಕ್ಕೆ ನಿರಾಕರಿಸಿದಾಗ ಗುಡ್ಡಿ ದೇವಿಯೊಂದಿಗೆ ಜಗಳವಾಡಿದ್ದಾನೆ.
ಇವರುರೆ ಜಗಳವಾಡುವುದನ್ನು ಗಮನಿಸಿದ ಗ್ರಾಮಸ್ಥರು ಧಾವಿಸಿದ್ದಾರೆ. ಇದನ್ನು ಅವಮಾನವೆಂದು ಭಾವಿಸಿದ ಜಾನು ಖಾನ್ ಸ್ವಲ್ಪ ಸಮಯದ ನಂತರ ಟ್ರ್ಯಾಕ್ಟರ್ ನಲ್ಲಿ ತನ್ನ ಸಹಚರರೊಂದಿಗೆ ಬಂದು ಗುಡ್ಡಿ ದೇವಿಯ ನಾಲಿಗೆ, ಮೂಗು ಕತ್ತರಿಸಿದ್ದಾನೆ. ಸ್ಥಳದಲ್ಲಿದ್ದ ಆಕೆಯ ಸಹೋದರ ಬಿಸ್ಮಿಲ್ಲಾ ರಕ್ಷಿಸಲು ಪ್ರಯತ್ನ ನಡೆಸಿದ್ದು ದಾಳಿಕೋರರು ಆತನ ಕೈ ಮುರಿದಿದ್ದಾರೆ.
ಗಾಯಾಳುಗಳನ್ನು ಸಂಕ್ರಾ ಆಸ್ಪತ್ರೆಗೆ ದಾಖಲಿಸಿ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಜೋಧ್ ಪುರ ಆಸ್ಪತ್ರೆಗೆ ಸೇರಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಆರೋಪಿಗಳನ್ನು ಬಂಧಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಂಕ್ರಾ ಠಾಣೆಯ ಉಸ್ತುವಾರಿ ಕಾಂತಾರಾಮ್ ತಿಳಿಸಿದ್ದಾರೆ.