alex Certify BIG NEWS: ಕೃಷಿ ಇಲಾಖೆ ನೇಮಕಾತಿ ನಿಯಮಾವಳಿ ತಿದ್ದುಪಡಿಗೆ ಸಂಪುಟ ಅಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೃಷಿ ಇಲಾಖೆ ನೇಮಕಾತಿ ನಿಯಮಾವಳಿ ತಿದ್ದುಪಡಿಗೆ ಸಂಪುಟ ಅಸ್ತು

ಬೆಂಗಳೂರು: ಕೃಷಿ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿಗೆ ಸಚಿವ ಸಂಪುಟ ಅಸ್ತು ಎಂದಿದೆ. ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತಿದ್ದುಪಡಿಗೆ ಒಪ್ಪಿಗೆ ಸೂಚಿಸಲಾಗಿದೆ.

ಪ್ರಸ್ತುತ ಕೃಷಿ ಇಲಾಖೆಯಲ್ಲಿ ಕರ್ನಾಟಕ ಕೃಷಿ ಸೇವೆಗಳು(ನೇಮಕಾತಿ) ನಿಯಮಗಳು 1999 ಜಾರಿಯಲ್ಲಿರುತ್ತದೆ.  ತದನಂತರ 2014 ರಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗಿರುತ್ತದೆ. ಕಳೆದ 20 ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ಸಮಗ್ರ ಪರಿಷ್ಕರಣೆ ಮಾಡಿರುವುದಿಲ್ಲ.

ಪ್ರಸ್ತುತ ಅವಧಿಯಲ್ಲಿ ಸಮಗ್ರ ಪರಿಷ್ಕರಣೆ ಮಾಡಿ ಜಾರಿಗೆ ತರಲಾಗಿದ್ದು, ಕೃಷಿ ಆಯುಕ್ತರು ಹಾಗೂ ಜಲಾನಯನ ಅಭಿವೃದ್ಧಿ ಆಯುಕ್ತರು ಈ ಹುದ್ದೆಗಳನ್ನು ಸೇರಿಸಲಾಗಿದೆ.

ಸಹಾಯಕ ಕೃಷಿ ನಿರ್ದೇಶಕರು ವೃಂದದ ನೇರ ನೇಮಕಾತಿ ಮತ್ತು ಮುಂಬಡ್ತಿ ಅನುಪಾತವನ್ನು 30:70 ಬದಲಾಗಿ 20:80 ರಂತೆ ನಿಗದಿಪಡಿಸಲಾಗಿದೆ. ಸಹಾಯಕ ಕೃಷಿ ನಿರ್ದೇಶಕ, ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ವೃಂದಗಳ ನೇರ ನೇಮಕಾತಿಯನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ತೀರ್ಮಾನಿಸಲಾಗಿದೆ.

ಕೃಷಿ ಅಧಿಕಾರಿ ವೃಂದದ ನೇರ ನೇಮಕಾತಿ ಮತ್ತು ಮುಂಬಡ್ತಿ ಅನುಪಾತವನ್ನು 50:50 ರಂತೆ ನಿಗದಿಪಡಿಸಲಾಗಿದ್ದು, ಶೇಕಡ 50 ರಲ್ಲಿ ನೇರ ನೇಮಕಾತಿಯಲ್ಲಿ, ಶೇಕಡ 85 ರಷ್ಟು ಕೃಷಿ ಪದವೀದರರಿಗೆ, ಶೇಕಡ 15 ರಷ್ಟು ಬಿ.ಟೆಕ್(ಕೃಷಿ ಇಂಜಿನಿಯರಿಂಗ್) / ಬಿ.ಟೆಕ್ (ಆಹಾರ ತಂತ್ರಜ್ಞಾನ / ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳ ಮೂಲಕ ಭರ್ತಿ ಮಾಡಲು ಕ್ರಮ ವಹಿಸಲಾಗಿದೆ.

ಕೃಷಿ ಪದವಿ ಹೊಂದಿಲ್ಲದ ಸಹಾಯಕ ಕೃಷಿ ಅಧಿಕಾರಿಗಳು ಇಲಾಖೆಯಲ್ಲಿ ಕಳೆದ 30-35 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಅವರಿಗೆ ಕೃಷಿ ಅಧಿಕಾರಿಯಾಗಿ ಒಂದು ಬಾರಿಗೆ ಮುಂಬಡ್ತಿ ನೀಡಲು ತೀರ್ಮಾನಿಸಲಾಗಿದೆ. ನಿಯಮಾವಳಿಗೆ ತಿದ್ದುಪಡಿ ತರುವ ಮೂಲಕ ಇಲಾಖೆಯ ಕೆಳಹಂತದ ಅಧಿಕಾರಿಗಳಾದ ಸಹಾಯಕ ಕೃಷಿ ಅಧಿಕಾರಿಗಳನ್ನು ಶೇಕಡ 100 ರಷ್ಟು ನೇರ ನೇಮಕಾತಿಯಿಂದ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಆ ಮೂಲಕ ಈ ನೇಮಕಾತಿಯಲ್ಲಿ ಶೇಕಡ 85 ರಷ್ಟು ಕೃಷಿ ಪದವೀದರರಿಗೆ, ಶೇಕಡ 15 ರಷ್ಟು ಬಿ.ಟೆಕ್ (ಕೃಷಿ ಇಂಜಿನಿಯರಿಂಗ್) / ಬಿ.ಟೆಕ್ (ಆಹಾರ ತಂತ್ರಜ್ಞಾನ / ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಪ್ರಯತ್ನದಿಂದ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...