ಬೆಂಗಳೂರು: ಮರಾಠ, ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ನಿಗಮ ಸ್ಥಾಪನೆ ವಿಚಾರವಾಗಿ ಸರ್ಕಾರಕ್ಕೆ ಪತ್ರ ಬರೆದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಡತನ ಎಂಬುದು ಜಾತಿ, ಧರ್ಮ ಸಮುದಾಯಗಳನ್ನು ಮೀರಿದ್ದು, ತಳ ಸಮುದಾಯಗಳಲ್ಲಿ ಮಾತ್ರ ಬಡವರಿಲ್ಲ, ಮೇಲ್ಜಾತಿಗಳಲ್ಲೂ ಬಡವರಿದ್ದಾರೆ. ಬಡವರ ಕಲ್ಯಾಣ ಕಾರ್ಯಕ್ರಮ ರೂಪಿಸಿದರೆ ಸ್ವಾಗತ ಅದನ್ನು ಬಿಟ್ಟು ರಾಜಕೀಯ ಬುದ್ಧಿಯ ಕಸರತ್ತನ್ನು ಖಂಡಿಸುತ್ತೇವೆ ಎಂದು ಗುಡುಗಿದ್ದಾರೆ.
ಮರಾಠ ಅಥವಾ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧಿಸುತ್ತಿಲ್ಲ. ಕನ್ನಡಿಗರು ಹಾಗೂ ಮರಾಠಿಗರ ಮಧ್ಯೆ ಆಗಾಗ ಸಂಘರ್ಷ ಇದ್ದೇ ಇದೆ. ಆದರೂ ಅವರು ಸೌಹಾರ್ದತೆಯಿಂದ ಬದುಕುತ್ತಿದ್ದರು. ಇದೀಗ ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿರುವುದರಿಂದ ಕನ್ನಡಿಗರ ಸ್ವಾಭಿಮಾನ ಕೆರಳಿಸುವ ಮೂಲಕ ರಾಜ್ಯದ ಶಾಂತಿ ಸುವ್ಯವಸ್ಥೆ ಕದಡುವ ಯತ್ನ ಮಾಡಲಾಗುತ್ತಿದೆ. ಇದಕ್ಕೆ ಸಿಎಂ ಯಡಿಯೂರಪ್ಪನವರೇ ನೇರ ಹೊಣೆ ಎಂದು ಕಿಡಿಕಾರಿದ್ದಾರೆ.
ಮೀಸಲಾತಿ, ಸಾಮಾಜಿಕ ನ್ಯಾಯದ ಬಗ್ಗೆ ನಾವು ಮಾತನಾಡಿದರೆ ನಮ್ಮನ್ನು ಜಾತಿವಾದಿಗಳು ಎಂದು ಬಿಜೆಪಿ ನಾಯಕರು ಟೀಕಿಸುತ್ತಿದ್ದರು. ಆದರೆ ಈಗ ಬಿಜೆಪಿ ಸರ್ಕಾರ ಮಾಡುತ್ತಿರುವುದೇನು? ಜಾತಿಗಳ ನಡುವೆ, ಭಾಷೆಗಳ ನಡುವೆಯೂ ವಿಷಬೀಜ ಬಿತ್ತಿ ಕಿತ್ತಾಡಿಕೊಳ್ಳುವಂತೆ ಮಾಡಲಾಗುತ್ತಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು, ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು, ಕೊರೊನಾದಿಂದ ಬೀದಿಗೆ ಬಿದ್ದವರ ರಕ್ಷಣೆಗೆ ಸರ್ಕಾರದ ಬಳಿ ಹಣವಿಲ್ಲ. ಹಾಗಾದರೆ ನಿಗಮ, ಪ್ರಾಧಿಕಾರ ಸ್ಥಾಪನೆಗೆ ನೂರಾರು ಕೋಟಿ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.